ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ
ನ್ಯಾಯಾಲಯದಲ್ಲಿನ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲು ಶಾಶ್ವತ ಲೋಕ್ ಅದಾಲತ್ ಪ್ರಾರಂಭಿಸಲಾಗಿದ್ದು ಪಕ್ಷಗಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಪಟ್ಟಣದ ನ್ಯಾಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಶ್ವತ ಲೋಕ್ ಅದಾಲತ್ ಪರಿಚಯ ಕಾರ್ಯಕ್ರಮವನ್ನು ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಚಿನ್ ಕೌಶಿಕ್ ಉದ್ಘಾಟಿಸಿದರು.
ಮುದ್ದೇಬಿಹಾಳ: ನ್ಯಾಯಾಲಯದಲ್ಲಿನ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲು ಶಾಶ್ವತ ಲೋಕ್ ಅದಾಲತ್ ಪ್ರಾರಂಭಿಸಲಾಗಿದ್ದು ಪಕ್ಷಗಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರೂ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿ ಹೇಳಿದರು.
ಪಟ್ಟಣದ ನ್ಯಾಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಇತರ ಎಲ್ಲ ಸರಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಶ್ವತ ಲೋಕ್ ಅದಾಲತ್ ಅನ್ನು ಪರಿಚಯಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಶಾಂತಿ ನೆಲೆಸಲಿ ಎಂಬ ಸದುದ್ದೇಶದಿಂದ ಶಾಶ್ವತ ಲೋಕ್ ಅದಾಲತ್ ಪ್ರಾರಂಭಿಸಲಾಗಿದೆ. ಈ ಮೊದಲು ಪ್ರತೀ ಮೂರು ತಿಂಗಳಿಗೊಮ್ಮೆ ಲೋಕ್ ಅದಾಲತ್ ಹಮ್ಮಿಕೊಳ್ಳುವ ಮೂಲಕ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗುತ್ತಿದ್ದು. ಸಧ್ಯ ಶಾಶ್ವತ ಲೋಕ್ ಅದಾಲತ್ ಮೂಲಕ ಯಾವುದೇ ಸಂದರ್ಭದಲ್ಲಿಯೂ ಕೂಡ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲು ಮುಂದಾಗಿದ್ದು ಚಾಲ್ತಿ ಇರುವ ಪ್ರಕರಣಗಳೂ ಸೇರಿದಂತೆ ಹೊಸ ವ್ಯಾಜ್ಯಗಳನ್ನೂ ಸಹ ಇಲ್ಲಿ ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗುತ್ತದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬ ಪಕ್ಷಗಾರರು ಪಡೆದುಕೊಳ್ಳಬೇಕು ಎಂದರು.
ಹಿರಿಯ ವಕೀಲ ಎಸ್.ಆರ್.ಸಜ್ಜನ ವಿಶೇಶ ಉಪನ್ಯಾಸ ನೀಡಿ ಖಾಯಂ ಲೋಕ ಅದಾಲತ್ ನಲ್ಲಿ ಪ್ರಕರಣ ದಾಖಲಿಸಲು ನ್ಯಾಯಾಲಯದ ಶುಲ್ಕ ವಿಧಿಸುವ ಅವಶ್ಯಕತೆ ಇರುವದಿಲ್ಲ. ಒಂದು ವೇಳೆ ಖಾಯಂ ಲೋಕ ಅದಾಲತ್‌ನಲ್ಲಿ ಪ್ರಕರಣ ಇತ್ಯರ್ಥಗೊಳ್ಳದಿದ್ದಲ್ಲಿ ಪ್ರಕರಣವನ್ನು ನ್ಯಾಯಾಲಯದ ಮೂಲಕ ಮುಂದುವರೆಸಲೂ ಅವಕಾಶಗಳು ಇವೆ. ಈ ಅವಕಾಶಗಳನ್ನು ಬಳಸಿಕೊಂಡು ಪಕ್ಷಗಾರರು ತಮ್ಮ ವ್ಯಾಜ್ಯಗಳಿಗೆ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು ಎಂದರು.
ನ್ಯಾಯವಾದಿಗಳ ಸಂಘದ ಅದ್ಯಕ್ಷ ಶಶಿಕಾಂತ ಮಾಲಗತ್ತಿ ಮಾತನಾಡಿ ಜನತೆಗೆ ತೀವ್ರವಾಗಿ ನ್ಯಾಯ ಒದಗಿಸುವ ಉದ್ದೇಶದಿಂದ ಶಾಶ್ವತ ಲೋಕ್ ಅದಾಲತ್ ಪ್ರಾರಂಭಿಸಲಾಗಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.
೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಚಿನ್ ಕೌಶಿಕ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಸಿವಿಲ್ ನ್ಯಾಯಾಧೀಶರಾದ ರಾಮಮೂರ್ತಿ ಎನ್, ಅಪರ್ ಸರ್ಕಾರಿ ವಕೀಲರಾದ ಎಚ್.ಎಲ್.ಸರೂರ, ಕಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಬಸವರಾಜ ಆಹೇರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಮೂರ್ತಿ ಕುಂಬಾರ, ತಹಸೀಲ್ದಾರ ಕಚೇರಿಯ ಶಿರಸ್ತೇದಾರ ಎಂ.ಎ.ಬಾಗೇವಾಡಿ, ನ್ಯಾಯವಾದಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಬಿ.ಗೌಡರ, ಹಿರಿಯ ನ್ಯಾಯವಾದಿಗಳಾದ ಜೆ.ಎ.ಚಿನಿವಾರ, ನ್ಯಾಯವಾದಿಗಳಾದ ರವಿ ನಾಲತವಾಡ, ಚೇತನ ಶಿವಶಿಂಪಿ, ಹಸೀನಾ ಅನಂತಪೂರ ಕಾನೂನು ಸೇವಾ ಸಮಿತಿಯ ಆಡಳಿತ ಸಹಾಯಕ ಅರವಿಂದ ಕುಂಬಾರ, ದಲಾಯತ್ ಮಹಾಂತೇಶ ಹಚರೆಡ್ಡಿ ಸೇರಿದಂತೆ ನ್ಯಾಯಾಲಯದ ಸಿಬ್ಬಂದಿ ಮತ್ತು ಪಕ್ಷಗಾರರು ಸೇರಿದಂತೆ ಉಪಸ್ಥಿತರಿದ್ದರು.
ಶಾಶ್ವತ ಲೋಕ್ ಅದಾಲತ್ ನಲ್ಲಿ ೧ಕೋಟಿ ರೂಪಾಯಿಗಳ ವರೆಗೆ ಪರಿಹಾರ ಕೊಡಿಸಲು ಅವಕಾಶಗಳಿವೆ. ವ್ಯಾಜ್ಯ ಮುಕ್ತ ದೇಶವನ್ನಾಗಿಸಲು ಸರ್ಕಾರ ಮತ್ತು ನ್ಯಾಯಾಂಗ ಇಲಾಖೆ ಸಾಕಷ್ಟು ಪ್ರಯತ್ನಿಸುತ್ತಿದ್ದು ಪಕ್ಷಗಾರರ ಸಹಭಾಗಿತ್ವ ಅವಶ್ಯವಿದೆ
–ರವೀಂದ್ರಕುಮಾರ ಕಟ್ಟಿಮನಿ. ಅಧ್ಯಕ್ಷರು, ತಾಲೂಕು ಕಾನೂನು ಸೇವಾ ಸಮಿತಿ, ಮುದ್ದೇಬಿಹಾಳ.