ಸುಂದರ ಬದುಕಿಗೆ ಸ್ಕೌಟ್ಸ್, ಗೈಡ್ಸ್ ಅಗತ್ಯ- ಟಿ ಎಸ್ ಆಲಗೂರ
ಇಂಡಿ: ಸುಂದರ ಬದುಕಿನೊಂದಿಗೆ ಆರೋಗ್ಯಕರ ಸಮಾಜ ಕಟ್ಟುವಲ್ಲಿ ಸ್ಕೌಟ್ಸ್-ಗೈಡ್ಸ್‌ನ ಶಿಸ್ತು ಮತ್ತು ಕೌಶಲ್ಯದ ಪಾತ್ರ ಮಹತ್ವದ್ದಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ ಎಸ್ ಆಲಗೂರ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಶುಕ್ರವಾರದಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಹಾಗೂ ಭಾರತ್ ಸ್ಕೌಟ್ಸ್ -ಗೈಡ್ಸ್ ಸ್ಥಳೀಯ ಸಂಸ್ಥೆಯ ಸಹಯೋಗದಲ್ಲಿ ಜರುಗಿದ ತಾಲೂಕ ಮಟ್ಟದ ದೇಶಭಕ್ತಿಗೀತೆಗಳ ಗೀತಗಾಯನ ಸ್ಪರ್ಧೆ ಹಾಗೂ
ಸ್ಕೌಟರ್ -ಗೈಡರ್ ಶಿಕ್ಷಕರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಸ್ಕೌಟ್ಸ್-ಗೈಡ್ಸ್ ಸೇರ್ಪಡೆಯಿಂದ ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನದ ಜತೆಗೆ ಕಲಿಕೆಯಲ್ಲೂ ಪ್ರಗತಿ ಸಾಧಿಸಲು ಸಾಧ್ಯ ಎಂದು ತಿಳಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿ ಎಸ್ ಆರ್ ನಡುಗಡ್ಡಿ ಮಾತನಾಡಿ, ಸಾಮಾಜಿಕ ಮೌಲ್ಯಗಳು, ರಾಷ್ಟ್ರ ಭಕ್ತಿ, ಸೇವಾ ಮನೋಭಾವವನ್ನು ಸ್ಕೌಟ್ಸ್-ಗೈಡ್ಸ್ ನಿಂದ ಪಡೆಯಲು ಸಾಧ್ಯ ಎಂದು ಹೇಳಿದರು.
ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ.ಮಂಜುನಾಥ ಕೋಟೆಣ್ಣವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ಕೌಟ್ಸ್-ಗೈಡ್ಸ್ ಸಂಸ್ಥೆಯಿಂದ ಲಕ್ಷಾಂತರ ವಿದ್ಯಾರ್ಥಿಗಳು ಸಾಹಸ-ಧೈರ್ಯದ ಗುಣ ಅಳವಡಿಸಿಕೊಂಡು ಶಿಸ್ತುಬದ್ಧ ಜೀವನ ರೂಢಿಸಿಕೊಂಡಿದ್ದು ಶ್ಲಾಘನೀಯ ಎಂದು ಹೇಳಿದರು.
ಜಿಲ್ಲಾ ಕಾರ್ಯದರ್ಶಿ ಪಿ ಎಸ್ ಕುಂಬಾರ ಮಾತನಾಡಿ,
ಮಕ್ಕಳು ಬಾಲ್ಯದಿಂದಲೇ ದೇಶಭಕ್ತಿಯನ್ನು ಬೆಳೆಸಿಕೊಂಡು ಉತ್ತಮ ನಾಗರಿಕರಾಗಿ ಹೊರಹೊಮ್ಮಬೇಕು ಎಂದು ಹೇಳಿದರು. ಸ್ಕೌಟ್ ಮಾಸ್ಟರ್ ಸಂತೋಷ ಬಂಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ಕೌಟ್ಸ್–ಗೈಡ್ಸ್ ಇದೊಂದು ಅನೌಪಚಾರಿಕ ಶಿಕ್ಷಣ ವ್ಯವಸ್ಥೆಯಾಗಿದ್ದು, ಮಕ್ಕಳಿಗೆ ವೈಯಕ್ತಿಕ ಶುಚಿತ್ವ, ಉತ್ತಮ ನಡವಳಿಕೆ, ಸಮಾಜಸೇವೆ, ರಾಷ್ಟ್ರಪ್ರೇಮ, ಸಸ್ಯ- ಪ್ರಾಣಿ-ಪೃಥ್ವಿ-ನೀರು-ಆಕಾಶ ಇವುಗಳ ಸಂರಕ್ಷಣೆಯ ಅರಿವು ಮೂಡಿಸಲಾಗುತ್ತದೆ ಎಂದು ಹೇಳಿದರು.
ತಾಲೂಕ ಕಾರ್ಯದರ್ಶಿ ಶಹಾಜಿ ಪಾಟೀಲ ಸ್ವಾಗತಿಸಿದರು. ಖಜಾಂಚಿ ಬಸವರಾಜ ಗೋರನಾಳ ನಿರ್ವಹಿಸಿದರು. ರಾಜ್ಯ ಪರಿಷತ್ ಸದಸ್ಯ ಎಸ್ ಎಸ್ ಬೊಮ್ಮನಳ್ಳಿ ಸ್ಕೌಟ್ಸ್ ಗೀತೆಯನ್ನು ಹಾಡಿದರು. ಬಿ ವ್ಹಿ ಹಿರೇಮಠ ವಾರ್ಷಿಕ ವರದಿ ವಾಚಿಸಿದರು. ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ರಮೇಶ ಕುಲಕರ್ಣಿ, ಜಿಪಿಟಿ ಶಿಕ್ಷಕರ ಸಂಘದ ಅಧ್ಯಕ್ಷ ಶಂಕರ ಕೋಳೆಕರ, ಸ್ಕೌಟ್ ಮಾಸ್ಟರ್ ಗಳಾದ ಸಂಗಮೇಶ ಬಂಡೆ, ಸಿ ಎಸ್ ಮೇತ್ರಿ, ಸಿ ಡಿ ಮಠಪತಿ ಸೇರಿದಂತೆ ತಾಲೂಕಿನ ಎಲ್ಲ ಸ್ಕೌಟ್ಸ್-ಗೈಡ್ಸ್ ಶಿಕ್ಷಕರು ಮತ್ತು ಮಕ್ಕಳು ಭಾಗವಹಿಸಿದ್ದರು.
ಗೀತಗಾಯನ ಸ್ಪರ್ಧೆಯಲ್ಲಿ ವಿವಿಧ ಶಾಲೆಯಿಂದ ಭಾಗವಹಿಸಿ, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಮಕ್ಕಳಿಗೆ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು. ತಾಲೂಕು ಮಟ್ಟದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಎನ್ ಎಂ ಹರನಾಳ, ಶರಣು ಕಂಠಿಕರ ಅವರನ್ನು ಸನ್ಮಾನಿಸಲಾಯಿತು. ನೂತನವಾಗಿ ತರಬೇತಿ ಪಡೆದ ಸ್ಕೌಟ್ಸ್-ಗೈಡ್ಸ್ ಶಿಕ್ಷಕರಿಗೆ ಅಭಿನಂದಿಸಲಾಯಿತು.