ಸ್ಕೌಟ್ಸ್, ಗೈಡ್ಸ್ ತಾಲೂಕ ಸಮಾವೇಶ ಕಾಯಕದ ಮಹತ್ವ ತಿಳಿಪಡಿಸಿದ ಸ್ಕೌಟ್ಸ್, ಗೈಡ್ಸ್- ಎ ಎಸ್ ಲಾಳಸೇರಿ
ಇಂಡಿ: ಸುಂದರ ಬದುಕು ಹಾಗೂ ಆರೋಗ್ಯಕರ ಸಮಾಜ ಕಟ್ಟುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‌ನ ಶಿಸ್ತು ಮತ್ತು ಕೌಶಲ್ಯದ ಪಾತ್ರ ಮಹತ್ವದ್ದಾಗಿದೆ ಎಂದು ಜಿಲ್ಲಾ ಪ್ರಭಾರಿ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಎ ಎಸ್ ಲಾಳಸೇರಿ ಹೇಳಿದರು.
ಅವರು ಪಟ್ಟಣದ ಗುರುಭವನದಲ್ಲಿ ಭಾರತ ಸ್ಕೌಟ್ಸ್, ಗೈಡ್ಸ್ ಸ್ಥಳೀಯ ಸಂಸ್ಥೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಹಮ್ಮಿಕೊಂಡ ಸ್ಕೌಟ್ಸ್ ಮತ್ತು ಕಬ್ ಮಾಸ್ಟರ್,ಗೈಡ್ ಕ್ಯಾಪ್ಟನ್ ಹಾಗೂ ಪ್ಲ್ಯಾಕ್ ಲೀಡರ್ ರವರ ತಾಲೂಕಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳು ನಾಲ್ಕು ಗೋಡೆಗಳ ನಡುವೆ ಓದು-ಬರಹ ಕಲಿಯುವುದರ ಜತೆಗೆ ನಿಸರ್ಗದ ಮಡಿಲಲ್ಲಿ ಒಂದಾಗಿ ಬೆರೆತು, ಸಮನ್ವಯದಿಂದ ಬಾಳಲು ಕಲಿಯುವಂತೆ ಉತ್ತೇಜಿಸುವ ಸ್ಕೌಟ್ಸ್ ಚಟುವಟಿಕೆಗಳು ತಾಲೂಕಿನಲ್ಲಿ ಹೆಚ್ಚಾಗಿ ನಡೆಯಬೇಕಿದೆ ಎಂದು ಸಲಹೆ ನೀಡಿದರು.
ಜಿಲ್ಲಾ ಕಾರ್ಯದರ್ಶಿ ಪಿ ಎಸ್ ಕುಂಬಾರ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಸೇರ್ಪಡೆಯಿಂದ ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನದ ಜತೆಗೆ ಕಲಿಕೆಯಲ್ಲೂ ಪ್ರಗತಿ ಸಾಧಿಸಲು ಸಾಧ್ಯ. ಹಾಗಾಗಿ ಎಲ್ಲ ಶಾಲಾ ಮಕ್ಕಳು ಸ್ಕೌಟ್ಸ್ ಮತ್ತು ಗೈಡ್ಸ್‌ಗೆ ಸೇರ್ಪಡೆಗೊಳ್ಳುವಂತೆ ಕ್ರಮವಹಿಸಬೇಕು ಎಂದು ತಿಳಿಸಿದರು.
ಸ್ಕೌಟ್ಸ್ ಮಾಸ್ಟರ್ ಸಂತೋಷ ಬಂಡೆ ಮಾತನಾಡಿ,ಸ್ಕೌಟ್ಸ್ ಮತ್ತು ಗೈಡ್ಸ್‌ನಿಂದ ಮಕ್ಕಳಲ್ಲಿ ಪರಿಸರ ಪ್ರಜ್ಞೆ, ಸಂಸ್ಕೃತಿಯ ಅರಿವು ಉಂಟಾಗುತ್ತದೆ. ಪರಿಸರ ಉಳಿಸಿ-ಬೆಳೆಸುವ ಮನೋಭಾವವನ್ನು ಮಕ್ಕಳಲ್ಲಿ ಹೆಚ್ಚಿಸಿ, ರಾಷ್ಟ್ರ ಪ್ರೇಮ, ದೇಶಭಕ್ತಿಯ ಪರಿಕಲ್ಪನೆಯನ್ನು ಗಟ್ಟಿಗೊಳಿಸಬೇಕು ಎಂದು ಹೇಳಿದರು. ತಾಲೂಕ ಕಾರ್ಯದರ್ಶಿ ಶಹಾಜಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ,ಮುಂದಿನ ಪೀಳಿಗೆಗೆ ಉತ್ತಮ ನಾಗರಿಕರನ್ನು ನಿರ್ಮಾಣ ಮಾಡುವ ಕೆಲಸ ಸ್ಕೌಟ್ಸ್ ಮತ್ತು ಗೈಡ್ಸ್‌ನಿಂದಾಗಬೇಕು. ಮನುಷ್ಯನಿಗೆ ಸಂತೋಷ ಮತ್ತು ಆನಂದ ಸ್ಕೌಟ್ಸ್ ಮತ್ತು ಗೈಡ್ಸ್‌ನಿಂದ ಸಿಗಲು ಸಾಧ್ಯ ಎಂದರು.
ಇಂಡಿ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್ ವ್ಹಿ ಹರಳಯ್ಯ, ಖಜಾಂಚಿ ಬಸವರಾಜ ಗೋರನಾಳ,ಸ್ಕೌಟ್ಸ್ ಮಾಸ್ಟರ್ ಗಳಾದ ವೈ ಜಿ ಬಿರಾದಾರ, ದತ್ತಾತ್ರೇಯ ಕೋಳಾರಿ,ಸಂಗಮೇಶ ಬಂಡೆ,ಎಸ್ ಎಸ್ ಧೂಳಖೇಡ, ಸಿ ಎಸ್ ಮೇತ್ರಿ ಹಾಗೂ ಗೈಡ್ ಕ್ಯಾಪ್ಟನ್ ಗಳಾದ ನಾಗೇಶ್ವರಿ, ಸುಮಂಗಲಾ ಸಿ, ಗೌರಿ, ಮಲ್ಲಮ್ಮ ಗಿರಣಿವಡ್ಡರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಗೈಡ್ ಕ್ಯಾಪ್ಟನ್ ಸವಿತಾ ಹಾದಿಮನಿ ವರದಿ ವಾಚಿಸಿದರು.