ಕಬ್ಬಿನ ಬೆಲೆಗೆ ಆಗ್ರಹಿಸಿ ಅಮರಗೋಳ ಕ್ರಾಸ್‌ನಲ್ಲಿ ರೈತರ ಧರಣಿ ಸತ್ಯಾಗ್ರಹ
ಪ್ರತಿ ಟನ್ ಕಬ್ಬಿಗೆ ಕನಿಷ್ಠ ₹3,500 ಬೆಂಬಲ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ರೈತ ಸಂಘದಯಿಂದ ಧರಣಿ.
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ : ಪ್ರತಿ ಟನ್ ಕಬ್ಬಿಗೆ ಕನಿಷ್ಠ ₹3,500 ಬೆಂಬಲ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ಅಖಂಡ ರೈತ ಸಂಘದ ನೇತೃತ್ವದಲ್ಲಿ ಹುನಗುಂದ–ಮುದ್ದೇಬಿಹಾಳ ರಾಜ್ಯ ಹೆದ್ದಾರಿ ಪಕ್ಕದ ಅಮರಗೋಳ ಕ್ರಾಸ್ ಬಳಿ ರೈತರು ಧರಣಿ ಸತ್ಯಾಗ್ರಹ ಮಂಗಳವಾರ ಪ್ರಾರಂಭಿಸಿದರು. ತಾಲ್ಲೂಕಿನ ಯರಗಲ್, ಅಮರಗೋಳ, ತಂಗಡಗಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ನೂರಾರು ರೈತರು ಧರಣಿಯಲ್ಲಿ ಪಾಲ್ಗೊಂಡು ಘೋಷಣೆ ಕೂಗಿದರು.
ಬಾಲಾಜಿ ಶುಗರ್ಸ್ ಕಾರ್ಖಾನೆ ಪ್ರತಿ ಟನ್‌ಗೆ ಕೇವಲ 2,901 ನೀಡುತ್ತಿದ್ದು, ಲೆಕ್ಕಪತ್ರಗಳಲ್ಲಿ ಪಾರದರ್ಶಕತೆ ಇಲ್ಲದೆ ರೈತರ ಶ್ರಮವನ್ನು ಅವಹೇಳನ ಮಾಡುತ್ತಿದೆ ಎಂದು ಆರೋಪ ವ್ಯಕ್ತವಾಯಿತು. ಕಬ್ಬಿನ ಕಾಟಾ ವೇಳೆ ತೂಕದಲ್ಲಿ ಮೋಸ, ಪಾವತಿಯಲ್ಲಿ ವಿಳಂಬ ಹಾಗೂ ಲಾರಿ ಸಾಲಿನ ಅಸಮರ್ಪಕ ನಿರ್ವಹಣೆ ರೈತರ ಅಸಮಾಧಾನಕ್ಕೆ ಕಾರಣವಾಗಿದೆ.
ರೈತ ಸಂಘದ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ, “ಯರಗಲ್ ಶುಗರ್ ಕಾರ್ಖಾನೆ ರೈತರ ಹಕ್ಕು ಕಸಿದುಕೊಳ್ಳುತ್ತಿದೆ. ಪ್ರತಿ ವರ್ಷ ಇದೇ ರೀತಿಯ ಅನ್ಯಾಯ ನಡೆಯುತ್ತಿದ್ದರು, ಸರ್ಕಾರ ಮತ್ತು ಅಧಿಕಾರಿಗಳು ಮೌನವಾಗಿದ್ದಾರೆ. ಮುಂದಿನ ಮೂರು ದಿನಗಳಲ್ಲಿ ಸರ್ಕಾರದಿಂದ ಸಕಾರಾತ್ಮಕ ನಿರ್ಧಾರ ಬಾರದಿದ್ದರೆ ಹೋರಾಟ ಉಗ್ರಗೊಳ್ಳಲಿದೆ. ಅಧಿಕಾರಿಗಳು ಕಾರ್ಖಾನೆ ಮಾಲೀಕರ ಒತ್ತಡಕ್ಕೆ ಬಿದ್ದು ರೈತರ ಧ್ವನಿಯನ್ನು ನಿರ್ಲಕ್ಷಿಸುತ್ತಿದ್ದಾರೆ. ರೈತರ ಹಕ್ಕಿಗಾಗಿ ರಸ್ತೆಗಿಳಿಯಬೇಕಾದ ಪರಿಸ್ಥಿತಿ ಬಂದಿದೆ,” ಎಂದು ಕಿಡಿಕಾರಿದರು.
ಯುವ ಮುಖಂಡ ಆನಂದ ಮುದೂರ ಹೇಳಿದರು, “ಬಾಲಾಜಿ ಶುಗರ್ ಸೇರಿದಂತೆ ಹಲವು ಖಾಸಗಿ ಕಾರ್ಖಾನೆಗಳು ರೈತರನ್ನು ವಂಚಿಸುತ್ತಿವೆ. ಸರ್ಕಾರವು ಕಾರ್ಖಾನೆ ಮಾಲೀಕರ ಪರ ನಿಂತಿರುವಂತಿದೆ. ನ್ಯಾಯ ಸಿಗುವವರೆಗೆ ಸತ್ಯಾಗ್ರಹ ಮುಂದುವರಿಯುತ್ತದೆ,” ಎಂದು ಹೋರಾಟದ ದೃಢಸಂಕಲ್ಪ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಯುವಕರು ಹಾಗೂ ಕಬ್ಬು ಬೆಳಗಾರರು “ರೈತನಿಗೆ ನ್ಯಾಯ ಕೊಡಿಸು, ಕಾರ್ಖಾನೆಗಳ ಕಾಟಾ ಲೆಕ್ಕ ಪರಿಶೀಲಿಸು 3,500 ಕನಿಷ್ಠ ಬೆಲೆ ಘೋಷಿಸು” ಎಂಬ ಘೋಷಣೆಗಳನ್ನು ಕೂಗಿ ಉತ್ಸಾಹ ವ್ಯಕ್ತಪಡಿಸಿದರು. ಹೋರಾಟದ ಮುಂದಿನ ಹಂತದಲ್ಲಿ ಕಾರ್ಖಾನೆ ಎದುರು ಮಹಾ ಧರಣಿ ಹಾಗೂ ಬೃಹತ್ ಆಂದೋಲನ ನಡೆಸುವ ಯೋಜನೆ ಇದ್ದು, ಕ್ರಮ ಕೈಗೊಳ್ಳದಿದ್ದರೆ ಕಬ್ಬು ಪೂರೈಕೆ ಸಂಪೂರ್ಣ ನಿಲ್ಲಿಸಲಾಗುವುದು ಎಂದು ಎಚ್ಚರಿಸಿದರು.
ಪೋಲಿಸ್ ಇಲಾಖೆ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟಿದ್ದರೂ, ಯಾವುದೇ ಸರ್ಕಾರಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದಿರುವುದು ರೈತರಲ್ಲಿ ನಿರಾಸೆ ಮೂಡಿಸಿದೆ. ಈ ಸತ್ಯಾಗ್ರಹ ಹೋರಾಟ ಕಬ್ಬಿನ ಬೆಲೆ ವಿವಾದಕ್ಕೆ ಹೊಸ ತಿರುವು ನೀಡಿದ್ದು, ಮುಂದಿನ ದಿನಗಳಲ್ಲಿ ತಾಲ್ಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಯುವ ಸಾಧ್ಯತೆ ವ್ಯಕ್ತವಾಗಿದೆ.ಈ ಸಂಧರ್ಭದಲ್ಲಿ ಅನೇಕ ರೈತರು, ಯುವಕರು ಹೋರಾಟದಲ್ಲಿ ಪಾಲ್ಗೊಂಡಿದ್ದರು.