VOJ ನ್ಯೂಸ್ ಡೆಸ್ಕ್: ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಇದೀಗ ಬಿಜೆಪಿ ವಲಯದಲ್ಲೇ ಸಂಚಲನ ಮೂಡಿಸಿದೆ.
ವಿಧಾನಸಭೆ ಚುನಾವಣೆ ಸಮೀಸುತ್ತಿದ್ದಂತೆ ರಾಜ್ಯ ಬಿಜೆಪಿಗೆ ಹೊಸ ತಲೆನೋವು ಎದುರಾಗಿದೆ. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ 40 % ಕಮಿಷನ್ ಆರೋಪದ ಪ್ರಕರಣ ರೋಚಕ ತಿರುವು ಪಡೆದುಕೊಂಡಿದೆ.
ಕಮಿಷನ್ ಬಿಲ್ ಕುರಿತು ಪ್ರಧಾನಿ ನರೇಂದ್ರ ಮೋದಿಗೆ ಅವರಿಗೆ ಪತ್ರ ಬರೆದಿದ್ದ ಸಂತೋಷ್ ಪಾಟೀಲ್ ಉಡುಪಿಯ ಶಾಂಭವಿ ಲಾಡ್ಜ್ನಲ್ಲಿ ನನ್ನ ಸಾವಿಗೆ ಸಚಿವ ಕೆ.ಎಸ್. ಈಶ್ವರಪ್ಪ ಕಾರಣ ಎಂದು ವಾಟ್ಸಪ್ ಮೇಸೆಜ್ ರವಾನಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನು ಸಂತೋಷ್ ಪಾಟೀಲ್ ಬೆಳಗಾವಿಯ ಹಿಂಡಲಗಾ ಗ್ರಾ.ಪಂ. ವ್ಯಾಪ್ತಿಯಲ್ಲಿ 4 ಕೋಟಿ ರೂ . ವೆಚ್ಚದಲ್ಲಿ ಅಲ್ಲಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗಳ ಬಿಲ್ ಬಿಡುಗಡೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರು ತಮ್ಮ ಸಹವರ್ತಿಗಳ ಮೂಲಕ ಶೇ 40 ರಷ್ಟು ಕಮಿಷನ್‌ಗೆ ಬೇಡಿಕೆ ಇಟ್ಟಿದ್ದಾರೆ.
ಕಮೀಷನ್ ಕೊಡದಿರುವುದರಿಂದ ನನಗೆ ಬಿಲ್ ಸಂದಾಯವಾಗಿಲ್ಲ ಎಂದು ಗುತ್ತಿಗೆದಾರ ಸಂತೋಷ್ ಪಾಟೀಲ್ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಅವರಿಗೆ ಇತ್ತೀಚೆಗೆ ಪತ್ರ ಬರೆದಿದ್ದರು. ಆದರೆ ಇದೀಗ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣದ ದಿಕ್ಕೇ ಬದಲಾಗಿದೆ.