ಅಭಿವೃದ್ಧಿಗೆ ಸುರಕ್ಷತೆ ಮತ್ತು ಸುಸ್ಥಿರತೆ ಅಗತ್ಯ: ಜಿಲ್ಲಾಧಿಕಾರಿ
ಟೊಯೊಟಾ ಗ್ರೇಟರ್ ಬೆಂಗಳೂರು ಬಿಡದಿ ಹಾಫ್ ಮ್ಯಾರಥಾನ್ ಯಶಸ್ವಿ
ರಾಮನಗರ: ಸುರಕ್ಷತೆ ಮತ್ತು ಸುಸ್ಥಿರತೆ ಎಲ್ಲರ ಆದ್ಯತೆಯಾಗಬೇಕು. ರಸ್ತೆ ಸುರಕ್ಷೆಯ ಬಗ್ಗೆ ಸಮಾಜವನ್ನು ಜಾಗೃತಗೊಳಿಸಲು ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಅವರು ಹೇಳಿದರು.
ಭಾನುವಾರ ಬಿಡದಿಯ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ , ಬಿಐಎ ಫೌಂಡೇಶನ್ ಸಹಯೋಗದೊಂದಿಗೆ ಟೊಯೊಟಾ ಗ್ರೇಟರ್ ಬೆಂಗಳೂರು ಬಿಡದಿ ಹಾಫ್ ಮ್ಯಾರಥಾನ್ 2024ನಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸುರಕ್ಷತೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಟೊಯೋಟಾ, ಬಿಐಎ ಪೌಂಡೇಶನ್ ಹಮ್ಮಿಕೊಂಡಿರುವ ಮ್ಯಾರಥಾನ್ ಸಾಕಷ್ಟು ಸಹಕಾರಿಯಾಗಲಿದೆ. ಮ್ಯಾರಥಾನ್ ನಲ್ಲಿ ಸಾವಿರಾರು ಮಂದಿ ಉತ್ಸಾಹದಿಂದ ಭಾಗವಹಿರುವುದು ಆಶಾದಾಯಕ ಬೆಳವಣಿಗೆ ಎಂದರು.
ಟಿಕೆಎಂನ ಹಿರಿಯ ಉಪಾಧ್ಯಕ್ಷ ಸುದೀಪ್ ಎಸ್ ದಾಲ್ವಿ ಅವರು ಮಾತನಾಡಿ ಮ್ಯಾರಥಾನ್ ಸುರಕ್ಷತೆ, ಸುಸ್ಥಿರತೆ ಮತ್ತು ಸಮುದಾಯ ಅಭಿವೃದ್ಧಿಗೆ ನೆರವಾಗಲಿದೆ. ನಾವು ಫಿಟ್ನೆಸ್ ಮತ್ತು ಆರೋಗ್ಯಕರ ಜೀವನವನ್ನು ಉತ್ತೇಜಿಸುವುದಲ್ಲದೆ, ಸಮುದಾಯದಲ್ಲಿ ಸುರಕ್ಷತೆ ಮತ್ತು ಸುಸ್ಥಿರತೆಯನ್ನು ಉತ್ತೇಜಿಸಲು ಏಕತೆಯ ಪ್ರಜ್ಞೆಯನ್ನು ಬೆಳೆಸುವ ವೇದಿಕೆಯನ್ನು ರಚಿಸಿದ್ದೇವೆ ಎಂದರು.
ಮ್ಯಾರಥಾನ್ 16 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ 21 ಕಿ.ಮೀ, 10 ಕಿ.ಮೀ ಮತ್ತು 5 ಕಿ.ಮೀ ಮತ್ತು 8 ರಿಂದ 15 ವರ್ಷದೊಳಗಿನ ಮಕ್ಕಳಿಗೆ 3 ಕಿ.ಮೀ ವಿಶೇಷ ವಿಭಾಗದಲ್ಲಿ ನಡೆಯಿತು. ಗುರಿಯನ್ನು ತಲುಪಿದ ಎಲ್ಲಾ ಓಟಗಾರರಿಗೆ ಪದಕಗಳು ಮತ್ತು ಇ-ಪ್ರಮಾಣಪತ್ರಗಳನ್ನು ಪಡೆದರೆ, ಉತ್ತಮ ಪ್ರದರ್ಶನ ನೀಡಿದವರಿಗೆ ನಗದು ಬಹುಮಾನಗಳನ್ನು ನೀಡಲಾಯಿತು.
ಕರ್ನಾಟಕ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವ ಕುಮಾರ್, ಕಿರ್ಲೋಸ್ಕರ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ನ ಅಧ್ಯಕ್ಷರಾದ ಗೀತಾಂಜಲಿ ಕಿರ್ಲೋಸ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಬಿಐಎ ಹಿರಿಯ ಅಧಿಕಾರಿಗಳು ಮತ್ತು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ನ ಹಿರಿಯ ನಾಯಕರು ಭಾಗವಹಿಸಿದ್ದರು.