ಬೆಂಗಳೂರು: ಸೆ. 23, 24, 25 ರಂದು ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಶಿ ಈ ವಿಷಯ ತಿಳಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು ಎಂದು ಮಹೇಶ್ ಜೋಶಿ ಮಾಹಿತಿ ನೀಡಿದ್ದಾರೆ. ಸಮ್ಮೇಳನದಲ್ಲಿ ಫ್ಲೆಕ್ಸ್ ಬಳಕೆಯನ್ನು ನಿಷೇಧಿಸುವಂತೆ, ಪರಿಸರ ಸ್ನೇಹಿ ಸಮ್ಮೇಳನವಾಗಿಸುವಂತೆ ಸೂಚಿಸಿರುವ ಸಿಎಂ ಬೊಮ್ಮಾಯಿ, ಈ ಸಂಬಂದ ಜಾಗೃತಿ ಮೂಡಿಸುವಂತೆ ಆದೇಶಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್, ಸಚಿವರಾದ ಶಿವರಾಂ ಹೆಬ್ಬಾರ್, ಬಿ.ಸಿ.ಪಾಟೀಲ್, ಹಿರಿಯ ಸಾಹಿತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ್ ಕಂಬಾರ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.