ಅಫಜಲಪುರ: ಮಹಿಳೆಯರಿಗೆ ಅನುಕಂಪ ತೋರಿಸುವುದಕ್ಕಿಂತ ಅವಕಾಶ ಕೊಟ್ಟರೆ ಏನೆಲ್ಲ ಸಾಧನೆ ಮಾಡುತ್ತಾರೆ. ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಆದರೆ ಸಾಧಿಸುವ ಛಲ ಗುರಿ ಇದ್ದರೆ ಜೀವನದಲ್ಲಿ ಏನಾದರೂ ಸಾಧಿಸಬಹುದು ಎನ್ನುವುದಕ್ಕೆ ಈ ಗ್ರಾಮೀಣ ಪ್ರತಿಭೆಯೇ ಸಾಕ್ಷಿ.
ತಾಲೂಕಿನ ಮಣ್ಣೂರ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿನಿ ಸುಕನ್ಯಾ ಶರಣಪ್ಪ ಸುತಾರ. ಪಿಯುಸಿ ಕಲಾ ವಿಭಾಗದಲ್ಲಿ 600 ಕ್ಕೆ 567 ( ಶೇ 94.5 ಪ್ರತಿಶತ) ಅಂಕ ಪಡೆದು ಅದ್ಭುತ ಪ್ರತಿಭೆ ಮೆರೆದಿದ್ದಾಳೆ. ನಗರ ಪ್ರದೇಶದ ಕಾಲೇಜ್ ಗಳಲ್ಲಿ ಓದುವವರಿಗೆ ನಾವೇನು ಕಡಿಮೆಯಿಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾಳೆ.
ಸುಕನ್ಯಾ ಸುತಾರ 1 ರಿಂದ 7 ತರಗತಿವರೆಗೆ ಮಣ್ಣೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8 ರಿಂದ 10 ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿ, ನಂತರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಓದಿದ್ದಾರೆ. ಇವರ ತಂದೆ ಬಡಿಗತನ ಕೆಲಸ ಮಾಡುತ್ತಿದ್ದು, ತಾಯಿ ಗೃಹಿಣಿಯಾಗಿದ್ದಾರೆ.
ಪೋಷಕರು ಮಗಳ ಓದಿಗೆ ಯಾವುದೇ ರೀತಿಯ ಅಡ್ಡಿ ಮಾಡಿದವರಲ್ಲ. ಓದಲು ಪ್ರೋತ್ಸಾಹ ನೀಡಿದ್ದಾರೆ. ಪ್ರತಿನಿತ್ಯ 8 ಗಂಟೆ ಓದುತ್ತಿದ್ದೆ. ಪಾಲಕರ ಪ್ರೋತ್ಸಾಹ, ಪ್ರಾಂಶುಪಾಲರ ಹಾಗೂ ಉಪನ್ಯಾಸಕರ ಮಾರ್ಗದರ್ಶನವೇ ನಾನು ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಲು ಕಾರಣವಾಯಿತು ಎನ್ನುತ್ತಾರೆ ಸುಕನ್ಯಾ ಸುತಾರ.
ಆಕೆಯ ಪ್ರತಿಭೆ ಗುರುತಿಸಿ ಕಾಲೇಜಿನ ಉಪನ್ಯಾಸಕರು ನೆರವಾಗಿದ್ದಾರೆ. ಕಾಲೇಜಿನಲ್ಲಿ ನಡೆಯುವ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಯಾವಾಗಲೂ ಮುಂದೆ ಇರುತ್ತಿದ್ದಳು. ಟ್ಯೂಶನ್‌ಗೆ ಹೋಗದೆ ಕಾಲೇಜಿನಲ್ಲಿ ಉಪನ್ಯಾಸಕರು ಮಾಡಿದ ಪಾಠದಿಂದ ಓದಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದೇನೆ. ಭವಿಷ್ಯದಲ್ಲಿ ಪದವಿ ಮುಗಿಸಿ ಪಿಎಸ್ಐ ಕೋಚಿಂಗ್ ಪಡೆದು ಉನ್ನತ ಅಧಿಕಾರಿಯಾಗುವ ಗುರಿಯಿದೆ ಎನ್ನುತ್ತಾಳೆ ಸುಕನ್ಯಾ ಸುತಾರ. ವಿದ್ಯಾರ್ಥಿನಿಯ ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಪಾಲಕರು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ: