ಮೇಲ್ಛಾವಣಿ ಕುಸಿದು ನಾಲ್ವರಿಗೆ ಗಾಯ: ಮೂವರು ಜಿಲ್ಲಾಸ್ಪತ್ರೆಗೆ ದಾಖಲು: ಶಾಸಕ, ಅಧಿಕಾರಿಗಳ ಭೇಟಿ
ನೊಂದ ಕುಟುಂಬಕ್ಕೆ ಪಡಿತರ ವಿತರಿಸಿದ ನಡಹಳ್ಳಿ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ತಾಲೂಕಿನ ಅರೇಮುರಾಳ ಗ್ರಾಮದಲ್ಲಿ ಬುಧವಾರ ಮಧ್ಯರಾತ್ರಿ ನಿರಂತರ ಸುರಿದ ಮಳೆಗೆ ಬೇರೊಂದು ಮನೆಯ ಗೋಡೆ ಇನ್ನೊಂದು ಮನೆಯ ಮೇಲ್ಛಾವಣಿ ಮೇಲೆ ಕುಸಿದ ಪರಿಣಾಮ ತಗಡಿನ ಮೇಲ್ಛಾವಣಿ ಧರೆಗುರುಳಿ ಮನೆಯೊಳಗೆ ಮಲಗಿದ್ದ ಒಂದೇ ಕುಟುಂಬದ ೧೦ ವರ್ಷದ ಮಗು ಸೇರಿ ನಾಲ್ವರು ಗಾಯಗೊಂಡಿದ್ದು ಇವರಲ್ಲಿ ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕಳಿಸಲಾಗಿದೆ. ಮನೆಯ ಯಜಮಾನ ರುದ್ರಪ್ಪ ಬಂಡಿವಡ್ಡರ, ಆತನ ಪತ್ನಿ ಮಲ್ಲಮ್ಮ, ಮಗಳು ಶಾರದಾ, ಮೊಮ್ಮಗ ರುಶಾಂತ(೧೦) ದುರಂತದಲ್ಲಿ ಸಿಲುಕಿದವರು. ರುದ್ರಪ್ಪ, ಮಲ್ಲಮ್ಮ, ಶಾರದಾ ಇವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಮೇಲ್ಛಾವಣಿ ಕುಸಿದ ಕೂಡಲೇ ಕಲ್ಲು, ಮಣ್ಣಿನದಿ ಸಿಲುಕಿದ್ದವರ ಕೂಗಾಟ, ಚೀರಾಟ ಕೇಳಿ ಅಕ್ಕಪಕ್ಕದವರು ಓಡಿ ಬಂದು ಗಾಯಾಳುಗಳನ್ನು ಹೊರಗೆ ತೆಗೆದಿದ್ದಾರೆ. ಅಂಬ್ಯೂಲೆನ್ಸ್ಗೆ ಕರೆ ಮಾಡಿದರೆ ಯಾವುದೇ ಸ್ಪಂಧನೆ ಸಿಕ್ಕಿಲ್ಲ. ಗ್ರಾಮಸ್ಥರೇ ಖಾಸಗಿಯಾಗಿ ಆಟೋವೊಂದನ್ನು ಬಾಡಿಗೆಗೆ ಪಡೆದು ಗಾಯಾಳುಗಳನ್ನು ಮುದ್ದೇಬಿಹಾಳ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕಳಿಸಿ ಸಕಾಲಿಕ ಚಿಕಿತ್ಸೆ ದೊರಕುವಂತೆ ನೋಡಿಕೊಂಡಿದ್ದಾರೆ. ಅಲ್ಲಿನ ವೈದ್ಯರ ಶಿಫಾರಸು ಮೇರೆಗೆ ಗುರುವಾರ ಬೆಳಿಗ್ಗೆ ಜಿಲ್ಲಾಸ್ಪತ್ರೆಗೆ ಕಳಿಸಿಕೊಡಲಾಗಿದೆ.
ನಡಹಳ್ಳಿ ಭೇಟಿ-ಪಡಿತರ ವಿತರಣೆ
ವಿಷಯ ತಿಳಿದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಅವರು ಮುಖಂಡರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ನೊಂದ ಕುಟುಂಬದ ಇತರೆ ಸದಸ್ಯರಾದ ಅಜ್ಜಿ ಚಿನ್ನಮ್ಮ ಬಂಡಿವಡ್ಡರ, ರುದ್ರಪ್ಪ ಅವರ ಹಿರಿಯ ಮಗಳು ಯಶೋಧಾ ಅವರಿಗೆ ಸಾಂತ್ವನ ಹೇಳಿದರು. ಘಟನೆ ನಡೆದು ೧೨ ಗಂಟೆ ಮೇಲಾದರೂ ಹಿರೇಮುರಾಳ ಗ್ರಾಪಂ ಪಿಡಿಓ, ಗ್ರಾಮ ಆಡಳಿತಾಧಿಕಾರಿ ಸೇರಿ ಯಾರೊಬ್ಬರೂ ಸ್ಥಳಕ್ಕೆ ಆಗಮಿಸಿ ವಸ್ತುಸ್ಥಿತಿ ಅರಿತುಕೊಂಡು ನೊಂದವರಿಗೆ ನೆರವಾಗಲು ಪ್ರಯತ್ನ ನಡೆಸಿಲ್ಲದಿರುವುದನ್ನು ಕೇಳಿ ಕೆಂಡಾಮಂಡಲರಾದ ಅವರು ಅಲ್ಲಿಂದಲೇ ಸಂಬಂಧಿಸಿದ ಅಧಿಕಾರಿಗಳಿಗೆ ಕರೆಮಾಡಿ ಬೇಜವಾಬ್ಧಾರಿತನಕ್ಕೆ ಬಿಸಿ ಮುಟ್ಟಿಸಿದರು. ೧೦೮ ಅಂಬ್ಯೂಲೆನ್ಸ್ ಸೇವೆಗೆ ೧೦೮ ಬಾರಿ ಕರೆ ಮಾಡಿದರೂ ಸ್ಪಂಧಿಸಿಲ್ಲ. ಪೊಲೀಸರೂ ಸ್ಥಳಕ್ಕೆ ಬಂದಿಲ್ಲ. ಯಾಕೆ ಈ ಅವ್ಯವಸ್ಥೆ. ತಾಲೂಕಿನಲ್ಲಿ ಆಡಳಿತ ವ್ಯವಸ್ಥೆ ಸತ್ತು ಹೋಗಿದೆಯೇ. ಬಡವರು, ರೈತರು ಎಂದರೆ ಆಡಳಿತ ವರ್ಗಕ್ಕೆ ಅಷ್ಟೊಂದು ನಿರ್ಲಕ್ಷಯವೇ ಎಂದು ಹರಿಹಾಯ್ದರು.
ಈ ವೇಳೆ ಸ್ಥಳಕ್ಕೆ ಬಂದ ಪಿಡಿಓ ಕೆ.ಎಚ್.ಕುಂಬಾರ ಅವರನ್ನು ಕೂಡಲೇ ನೊಂದ ಕುಟುಂಬಕ್ಕೆ ಅಗತ್ಯ ನೆರವು ನೀಡಬೇಕೆಂದು ಸೂಚನೆ ನೀಡಿದರು.
ಘಟನೆಯಲ್ಲಿ ಎಲ್ಲವನ್ನೂ ಕಳೆದುಕೊಂಡ ಕುಟುಂಬಕ್ಕೆ ತಾತ್ಕಾಲಿಕ ನೆರವಾಗಲು ವೈಯುಕ್ತಿಕವಾಗಿ ದಿನಬಳಕೆ ವಸ್ತುಗಳಿರುವ ಪಡಿತರ ಕಿಟ್ ವಿತರಿಸಿದರು. ಯುವ ಮೋರ್ಚಾ ಅಧ್ಯಕ್ಷ ಗಿರೀಶಗೌಡ ಪಾಟೀಲ ಹಿರೇಮುರಾಳ, ಬಸವರಾಜ ಸರೂರ, ಬಸವರಾಜ ನಾಗರಿತ್ತಿ, ಆದಪ್ಪ ರಾಮೋಡಗಿ, ಹುಲ್ಲಪ್ಪ ಮುರಾಳ, ರಮೇಶ ವಡ್ಡರ, ನಾಗಪ್ಪ ತಾಳಿಕೋಟೆ, ಆಕಾಶ ನಾಗರಿತ್ತಿ, ಎಂ.ಎಚ್.ನಾಗರಿತ್ತಿ, ಶಿವಾನಂದ ಪಾಟೀಲ, ವೀರೇಶ ಬಡಿಗೇರ, ಗ್ರಾಪಂ ಕಾರ್ಯದರ್ಶಿ ನಿಂಗಣ್ಣ ಬಿರಾದಾರ ಇತರರಿದ್ದರು.
ತಾತ್ಕಾಲಿಕ ವ್ಯವಸ್ಥೆ
ಮದ್ಯಾಹ್ನದ ನಂತರ ಗ್ರಾಪಂ ವತಿಯಿಂದ ಸಂತ್ರಸ್ತ ಕುಟುಂಬಕ್ಕೆ ದಿನಬಳಕೆ ವಸ್ತುಗಳಾದ ಪಾತ್ರೆ, ಪಗಡೆ, ಆಹಾರ ಧಾನ್ಯದ ಕಿಟ್ ಸೇರಿದಂತೆ ಕೆಲ ಸಾಮಗ್ರಿಗಳನ್ನು ಒದಗಿಸಲಾಯಿತು. ಅಗತ್ಯ ಬಿದ್ದರೆ ಇನ್ನಷ್ಟು ನೆರವು ನೀಡುವುದಾಗಿ ಭರವಸೆ ನೀಡಲಾಯಿತು. ಸಧ್ಯ ನೊಂದ ಕುಟುಂಬಕ್ಕೆ ವಾಸಕ್ಕೆ ಮನೆ ಇಲ್ಲದ ಕಾರಣ ಸರ್ಕಾರಿ ಪ್ರಾಥಮಿಕ ಶಾಲೆಯ ಒಂದು ಕೊಠಡಿಯಲ್ಲಿ ಇರಲು ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿದೆ.
ತಹಶೀಲ್ದಾರ್, ಇಓ, ಶಾಸಕ ಭೇಟಿ
ನಡಹಳ್ಳಿಯವರು ಬಂದು ಹೋದ ನಂತರ ಕೆಲ ಹೊತ್ತಿನ ಮೇಲೆ ತಹಶೀಲ್ದಾರ್ ಕೀರ್ತಿ ಚಾಲಕ್, ತಾಪಂ ಇಓ ವೆಂಕಟೇಶ ವಂದಾಲ ಅವರು ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಮಾಹಿತಿ ಪಡೆದುಕೊಂಡು ನೊಂದ ಕುಟುಂಬಕ್ಕೆ ಸರ್ಕಾರದ ನಿಯಮಗಳ ಪ್ರಕಾರ ಅಗತ್ಯ ನೆರವು ನೀಡುವಂತೆ ಪಿಡಿಓಗೆ ಸೂಚಿಸಿದರು. ನಂತರ ಶಾಸಕ ಸಿ.ಎಸ್.ನಾಡಗೌಡ ಅವರು ಆಗಮಿಸಿ ಸಾಂತ್ವನ ಹೇಳಿದರು. ಬಂಡಿವಡ್ಡರ ಅವರದ್ದು ತೀರ ಬಡಕುಟುಂಬವಾಗಿದ್ದು ವಾಸಿಸಲು ಮನೆ ಇಲ್ಲ ಎನ್ನುವುದನ್ನು ತಿಳಿದು ಅವರಿಗೆ ಮನೆ ಮಂಜೂರು ಮಾಡುವ ಕುರಿತು ಗ್ರಾಪಂನಿಂದ ಕ್ರಮ ಜರುಗಿಸುವಂತೆ ಸೂಚಿಸಿದರು. ಸರ್ಕಾರದಿಂದ ಪ್ರಕೃತಿ ವಿಕೋಪದ ಅಡಿಯಲ್ಲಿ ಲಭ್ಯವಿರುವ ಪರಿಹಾರವನ್ನು ದೊರಕಿಸಿಕೊಡುವ ಭರವಸೆ ನೀಡಿದರು.