ಮಸ್ಕಿ: 1.50 ಕೋಟಿಯಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿ. ಆರಂಭವಾಗಿ ಮೂರು ತಿಂಗಳು ಗತಿಸಿದರೂ ಸಾಗುತ್ತಿಲ್ಲ ಕಾಮಗಾರಿ, ಸ್ಥಳೀಯರ ವಿರೋಧದ ಮಧ್ಯೆಯೂ ಅಧಿಕಾರಿಗಳು ಹಾಗೂ ಗುತ್ತಿಗೆದಾರ ಸೇರಿ ರಸ್ತೆ ಕಾಮಗಾರಿಯನ್ನು ಕಳಪೆಯಾಗಿ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ.
ಹೌದು ರಾಯಚೂರ ಜಿಲ್ಲೆಯ ಮಸ್ಕಿ ತಾಲೂಕಿನ ಮಾರಲದಿನ್ನಿಯಿಂದ ಉಸ್ಕಿಹಾಳ ಗ್ರಾಮದ ವರೆಗೆ ಜಿಲ್ಲಾ ಪಂಚಾಯತಿಯಿಂದ 1.50 ಕೋಟಿ ರೂ.ಗಳಲ್ಲಿ, 5 ಕಿ.ಮೀ. ರಸ್ತೆ ಡಾಂಬರೀಕರಣ ಕಾಮಗಾರಿ ನಡೆಯುತ್ತಿದೆ. ಆದರೆ ಕಾಮಗಾರಿ ಪಡೆದ ಗುತ್ತೇದಾರ ರಸ್ತೆ ಕಾಮಗಾರಿ ತೀರಾ ಕಳಪೆ ಗುಣಮಟ್ಟದಿಂದ, ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಕೆಲಸ ಮಾಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಮಲ್ಲನಗೌಡ ಪಾಟೀಲ್ ಆರೋಪ ಮಾಡುತ್ತಿದ್ದಾರೆ.
ಇನ್ನೂ ಕಾಮಗಾರಿ ಆರಂಭವಾಗಿ ಮೂರು ತಿಂಗಳೇ ಕಳೆದಿವೆ.ಮಂದಗತಿಯಲ್ಲಿ ನಡೆಯುತ್ತಿರುವ ಕಾಮಗಾರಿ ಮೆಟಲಿಂಗ್ ಹಂತದಲ್ಲೆ ಕಳಪೆ ಗುಣಮಟ್ಟದಿಂದ ಕೂಡಿದ್ದರಿಂದ ಈ ರಸ್ತೆ ಪೂರ್ಣವಾಗುವುದರಲ್ಲೇ ಹಾಳಾಗುವುದು ಖಚಿತ ಎಂಬುದು ಆರೋಪವಾಗಿದೆ. ಇದಕ್ಕೆ ಸಂಬಂದಿಸಿದಂತೆ ಎರಡೂ ಗ್ರಾಮಸ್ಥರು ಹಾಗೂ ಸಂಘಟನೆಳಿಂದ ಹಲವಾರು ಬಾರಿ ಸಂಬಂದಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾರೂ ಇತ್ತ ಗಮನ ಹರಿಸುತ್ತಿಲ್ಲ. ಈಗಾಗಲೇ 1 ಕಿ.ಮೀ ರಸ್ತೆ ಡಾಂಬರೀಕರಣ ಮಾಡಲಾಗಿದೆ. ಆಗಿರುವ ರಸ್ತೆ ಒಂದು ತಿಂಗಳು ಕಳೆಯುವುದರಲ್ಲಿ ಅಲ್ಲಲ್ಲಿ ಕಿತ್ತು ಹೋಗಿದೆ. ಇಂತಹ ಕಳಪೆ ಕಾಮಗಾರಿ ಮಾಡುತ್ತಿದ್ದರೂ ಕ್ರಮ ಕೈಗೊಳ್ಳದ ಜಿಲ್ಲಾ ಪಂಚಾಯತ್ ಅಧಿಕಾರಿಗಳು ನಡೆ ನೋಡಿದರೆ ಗುತ್ತಿಗೆದಾರರೊಂದಿಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.