ಲ್ಯಾಂಡ್ ಬಿಟ್ ಕಾರ್ಯ ಸ್ಥಗಿತಗೊಳಿಸಲು ಮನವಿ
ಇಂಡಿ : ರಾಜ್ಯಾದ್ಯಂತ ಸರಕಾರಿ ಜಮೀನು ಒತ್ತುವರಿ ಮತ್ತು ಕಬಳಿಕೆೆ ತಡೆಗೆ ಲ್ಯಾಂಡ್ ‘ಬೀಟ್’ ಮೋಬೈಲ್ ಅ್ಯಪ್ ಹೊಸದೊಂದು ತಂತ್ರಾಂಶ ಜಾರಿಗೊಳಿಸಿದ್ದು, ಕ್ಷೇತ್ರ ಕಾರ್ಯಕ್ಕೆ ತೆರಳಿದಾಗ ಅದರಲ್ಲಿ ಅನೇಕ ನ್ಯೂನ್ಯತೆಗಳು ಕಂಡುಬರುತ್ತಿವೆ. ಆ ಕಾರಣದಿಂದಾಗಿ ಲ್ಯಾಂಡ್ ಬೀಟ್ ಕಾರ್ಯ ಸ್ಥಗಿತಗೊಳಿಸಲು, ಕರ್ನಾಟಕ ಗ್ರಾಮ ಆಡಳಿತ ಇಂಡಿ ತಾಲ್ಲೂಕು ಸಂಘದಿಂದ ಮಂಗಳವಾರ ಶಿರಸ್ತೆದಾರ ಎಸ್. ಆರ್. ಮುಜಗೊಂಡ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಆಡಳಿತ ಸೌಧದಲ್ಲಿ ಮನವಿ ಸಲ್ಲಿಸಿದ ಗ್ರಾಮ ಆಡಳಿತ ಅಧಿಕಾರಿಗಳು, ಕೆರೆಗಳು, ಸ್ಮಶಾನಗಳು, ಶಾಲಾ ಕಾಲೇಜುಗಳು, ಅರಣ್ಯ ಜಮೀನುಗಳು ಹಾಗೂ ಗ್ರಾಮಠಾಣದಂತಹ ಜಮೀನುಗಳು ಈ ಹಿಂದೆಯೇ ಜಲಸಂಪನ್ಮೂಲ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ, ಶಿಕ್ಷಣ ಇಲಾಖೆ, ಹಾಗೂ ಅರಣ್ಯ ಇಲಾಖೆಗಳಿಗೆ ಹಸ್ತಾಂತರವಾಗಿವೆ. ಆದರೂ ಲ್ಯಾಂಡ್ ಬೀಟ್ ಮೊಬೈಲ್ ಆಪ್ ನಲ್ಲಿ ಅಂತಹ ಜಮೀನುಗಳು ಬೀಟ್ ಮಾಡಲು ಮತ್ತೆ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಆದರೆ ಭೌತಿಕವಾಗಿ ಹೆಚ್ಚು ವಿಸ್ತೀರ್ಣ ಇರುವ ಜಮೀನಿನ ಸ.ನಂ. ಗಳ ಬೀಟ್ ಮಾಡುವುದು ಕಷ್ಟಸಾಧ್ಯವಾಗಿದೆ. ಅದಲ್ಲದೇ ಬರಗಾಲವಾಗಿರುವುದರಿಂದ ಪ್ರಕೃತಿ ವಿಕೋಪ ನಿರ್ವಹಣಾ ಕಾರ್ಯ, ಲೋಕಸಭಾ ಚುನಾವಣೆ ಸಂಬಂಧಿತ ತುರ್ತು ಕೆಲಸಗಳು, ಪಹಣಿಗಳಿಗೆ ಆಧಾರ್ ಸೀಡಿಂಗ್ ಕಾರ್ಯ, ದೈನಂದಿನ ರೈತರ, ಸಾರ್ವಜನಿಕರ ಕಾರ್ಯಗಳ ಜೊತೆ ಜೊತೆಗೆ ಸಮಯ ಹೊಂದಾಣಿಕೆ ಕಷ್ಟಸಾಧ್ಯವಾಗಿದೆ. ಅದಲ್ಲದೇ ತಂತ್ರಾಂಶದಲ್ಲಿ ಅನೇಕ ನ್ಯೂನ್ಯತೆಗಳು ಇರುವುದರಿಂದ, ಮೊಬೈಲ್ ತಂತ್ರಾಂಶವು ಪೂರ್ಣ ಪ್ರಮಾಣದಲ್ಲಿ ಸುಧಾರಣೆಯಾಗುವುದು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳಿಗೆ ಇರುವ ಸಂಶಯಗಳ ನಿವಾರಣೆ ಅಗತ್ಯವಿರುತ್ತದೆ. ಹಾಗಾಗಿ ಈ ಬಿರುಬೇಸಿಗೆಯಲ್ಲಿ ಚುನಾವಣೆ ಮತ್ತು ಬರಗಾಲದ ವಿಪತ್ತುದಂತಹ ಬಾರಿ ಒತ್ತಡದ ಕೆಲಸ ಕಾರ್ಯಗಳು ಇರುವುದರಿಂದ ಗ್ರಾಮ ಆಡಳಿತ ಅಧಿಕಾರಿಗಳ ಮಾನಸಿಕ ಒತ್ತಡ ಹಾಗೂ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಹಾಗಾಗಿ ಲ್ಯಾಂಡ್ ಬೀಟ್ ಕಾರ್ಯ ಸ್ಥಗಿತಗೊಳಿಸಲು ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಸ್ ಎಚ್ ಲಾಳಸಂಗಿ, ಮಹೇಶ ರಾಠೋಡ, ಗಡ್ಡೆಪ್ಪ , ಪ್ರಕಾಶ ಚವಡಿಹಾಳ, ಶಂಕರ್ ಕಲಕೇರಿ, ಬಿ ಎಸ್ ಅವಜಿ, ಎಸ್ ಬಿ ಹಿರೇಬೇವನೂರ, ಮಲ್ಲಿಕಾರ್ಜುನ ಮಾರಲಬಾವಿ, ಚೌಧರಿ ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.