ಮಕ್ಕಳ ಪ್ರತಿಭೆ ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡಿ-ಯಶವಂತರಾಯಗೌಡ ಪಾಟೀಲ
ಇಂಡಿ: ಎಲ್ಲ ಮಕ್ಕಳಲ್ಲೂ ವಿಶೇಷವಾದ ಪ್ರತಿಭೆ ಅಡಗಿದ್ದು, ಅದನ್ನು ಪ್ರೋತ್ಸಾಹಿಸಿ ಬೆಳೆಸುವ ಕೆಲಸವನ್ನು ಪಾಲಕರು ಹಾಗೂ ಶಿಕ್ಷಕರು ಮಾಡಬೇಕು ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ಸೋಮವಾರದಂದು ಪಟ್ಟಣದ ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಕರ್ನಾಟಕ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಸಹಯೋಗದಲ್ಲಿ ಹಮ್ಮಿಕೊಂಡ ತಾಲೂಕ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿನ ಪ್ರತಿಭೆಯನ್ನು ಬೆಳಕಿಗೆ ತರುವಲ್ಲಿ ಪ್ರತಿಭಾ ಕಾರಂಜಿಯಂಥ ಸ್ಪರ್ಧೆಗಳು ಅವಶ್ಯ. ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡಿದರೆ, ಇನ್ನೂ ಉನ್ನತ ಸಾಧನೆ ಮಾಡಬಲ್ಲರು ಎಂದು ಹೇಳಿದರು. ಕರ್ನಾಟಕ ವಿದ್ಯಾವರ್ಧಕ ಸಂಸ್ಥೆಯ ಕಾರ್ಯದರ್ಶಿ ಪಿ ಬಿ ಕತ್ತಿ ಮಾತನಾಡಿ, ಮಕ್ಕಳಿಗೆ ನಾಡಿನ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಕಲಿಸಿಕೊಡುವ ಮೂಲಕ ಅವರನ್ನು ದೇಶದ ಸತ್ಪ್ರಜೆಗಳನ್ನಾಗಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಟಿ ಎಸ್ ಆಲಗೂರ ಪ್ರಾಸ್ತಾವಿಕವಾಗಿ ಮಾತನಾಡಿ, ಬೆಳೆಯುವ ಕುಡಿಯನ್ನು ಮೊಳಕೆಯಲ್ಲಿಯೇ ಚಿವುಟದೆ ಅದನ್ನು ಪ್ರೋತ್ಸಾಹಿಸಿ ಬೆಳೆಸುವ ಮೂಲಕ ದೇಶದ ಆಸ್ತಿಯನ್ನಾಗಿಸುವ ಗುರುತರ ಜವಾಬ್ದಾರಿ ತಮ್ಮೆಲ್ಲರ ಮೇಲಿದೆ ಎಂದರು.
ಇಂಡಿ ಪುರಸಭೆ ಅಧ್ಯಕ್ಷ ಅಂಬಾಜಿ ರಾಠೋಡ,ತಾಲೂಕ ಅಕ್ಷರ ದಾಸೋಹ ಅಧಿಕಾರಿ ಸುಜಾತಾ ಪೂಜಾರಿ,ಕರ್ನಾಟಕ ರಾಜ್ಯ ನೌಕರರ ಸಂಘದ ತಾಲೂಕಾಧ್ಯಕ್ಷ ಬಸವರಾಜ ರಾವೂರ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಎನ್ ಎಂ ಕಾಳೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ವೈ ಟಿ ಪಾಟೀಲ, ವಿಭಾಗೀಯ ಉಪಾಧ್ಯಕ್ಷ ಎಸ್ ವ್ಹಿ ಹರಳಯ್ಯ, ಶಿಕ್ಷಕರ ಸೊಸೈಟಿಯ ಅಧ್ಯಕ್ಷ ಪಿ ಎಸ್ ಚಾಂದಕವಟೆ, ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಸವರಾಜ ಕುಮಸಗಿ,ಕರ್ನಾಟಕ ರಾಜ್ಯ ಪ್ರೌಢ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಎ ಎಸ್ ಬಿರಾದಾರ, ತಾಲೂಕ ದೈಹಿಕ ಶಿಕ್ಷಣ ಪರಿವೀಕ್ಷಕ ಹಣಮಂತ ಮಾಳಗೊಂಡ, ಜಿಪಿಟಿ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಶಂಕರ ಕೋಳೆಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕ್ಷೇತ್ರ ಸಮನ್ವಯಾಧಿಕಾರಿ ಎಸ್ ಆರ್ ನಡುಗಡ್ಡಿ ಸ್ವಾಗತಿಸಿದರು. ಬಿ ಆರ್ ಪಿ ಬಸವರಾಜ ಗೋರನಾಳ ನಿರೂಪಿಸಿದರು. ತಾಲೂಕ ನೋಡಲ್ ಅಧಿಕಾರಿ ಎ ಸಿ ಹುಣಸಗಿ ವಂದಿಸಿದರು.
ಪ್ರತಿಭಾ ಕಾರಂಜಿಯ ವಿವಿಧ ಸ್ಪರ್ಧೆಯಲ್ಲಿ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮಕ್ಕಳು ಭಾಗವಹಿಸಿದ್ದರು. ಎಲ್ಲ ಸಮೂಹ ಸಂಪನ್ಮೂಲ ವ್ಯಕ್ತಿಗಳು, ನಿರ್ಣಾಯಕ ಶಿಕ್ಷಕರು ಪಾಲ್ಗೊಂಡಿದ್ದರು.