ವಿಜಯಪುರ : ಮಾಜಿ ಶಾಸಕ, ಸಿಎಂ ಬೊಮ್ಮಾಯಿ ಹಾಗೂ ಬಿಜೆಪಿ ಮುಖಂಡರ ಜೊತೆ ಇದ್ದ ವೇದಿಕೆಯಲ್ಲಿ ಕಾಣಿಸಿಕೊಂಡು ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣರಾಗಿದ್ದಾರೆ. ಇಂಡಿ ಕ್ಷೇತ್ರದ ಮಾಜಿ ಶಾಸಕ ರವಿಕಾಂತ್ ಪಾಟೀಲ ಹಾಗೂ ಅವರ ಸುಪುತ್ರ ವಿರಾಜ್ ಪಾಟೀಲ ಕೊಡಗಾನೂರಿನಲ್ಲಿ ನಡೆದ ನೀರಾವರಿ ಯೋಜನೆ ಚಾಲನೆ ಸಮಾರಂಭ ಅದರಲ್ಲೂ ಬಿಜೆಪಿ ನಾಯಕರೇ ಇದ್ದ ಕಾರ್ಯಕ್ರಮದಲ್ಲಿ ಹಾಜರ್ ಆಗಿ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಮೂರು ಬಾರಿ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿದ್ದ ರವಿಕಾಂತ್ ಪಾಟೀಲ, 2018ರ ವಿಧಾನಸಭೆ ಚುನಾವಣೆಯಲ್ಲಿ ಇಂಡಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರಿಗೆ ಟಿಕೆಟ್ ಘೋಷಣೆಯಾಗುವ ಲೆಕ್ಕಾಚಾರವೂ ಇತ್ತು. ಆದರೆ ಬಿಜೆಪಿ ನಾಯಕ ಯಡಿಯೂರಪ್ಪ ಸಮ್ಮುಖದಲ್ಲೇ ಇಂಡಿ ಕ್ಷೇತ್ರದ ಇತರೆ ಬಿಜೆಪಿ ಆಕಾಂಕ್ಷಿಗಳು ವೇದಿಕೆಯಲ್ಲೇ ಆಕ್ರೋಶ ಹೊರಹಾಕಿದ್ದರು. ಸಿಂದಗಿ ಉಪಚುನಾವಣೆ ವೇಳೆ ಜೆಡಿಎಸ್ ಸೇರಿದ್ದ ರವಿಕಾಂತ ಪಾಟೀಲರು ಆ ಕ್ಷೇತ್ರದ ಅಭ್ಯರ್ಥಿಯಾಗುವ ಲೆಕ್ಕಾಚಾರವೂ ಇತ್ತು. ಆದರೆ ಮುಸ್ಲಿಂ ಮಹಿಳೆಗೆ ಜೆಡಿಎಸ್ ಟಿಕೆಟ್ ಘೋಷಿಸಲಾಯಿತು.
ನಂತರದ ದಿನಗಳಲ್ಲಿ ಮೌನವಾಗಿದ್ದ ರವಿಕಾಂತ ಪಾಟೀಲರು ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಇತರೆ ಬಿಜೆಪಿ ನಾಯಕರು ಉಪಸ್ಥಿತರಿದ್ದ ಕಾರ್ಯಕ್ರಮದ ವೇದಿಕೆಯಲ್ಲಿ ಕಾಣಿಸಿಕೊಂಡರು. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ರವಿಕಾಂತ ಪಾಟೀಲರು ಮತ್ತೆ ಬಿಜೆಪಿ ಸೇರಿ ಅಭ್ಯರ್ಥಿಯಾಗುವ ಪ್ರಯತ್ನದಲ್ಲಿದ್ದಾರೆಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆದಿದೆ.