ಲಿಂಗಸೂಗೂರು: ಕಳೆದ ಒಂದು ತಿಂಗಳಿಂದ ಜಾನುವಾರುಗಳು ಸರಿಯಾಗಿ ಆಹಾರ ನೀರು ಸೇವಿಸದೇ ಕಾಯಿಲೆಗಳಿಗೆ ತುತ್ತಾಗಿ ನೆರಳಿ ನೆರಳಿ ಸಾವನ್ನೊಪ್ಪುತ್ತಿವೆ. ಇತ್ತ ಪಶು ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ರಾಸುಗಳಿಗೆ ಶತಾಯ ಗತಾಯ ಔಷದೋಪಚಾರ ಮಾಡಿದರೂ ರೋಗ ಲಕ್ಷಣಗಳು ಮಾತ್ರ ಹತೋಟಿಗೆ ಬರುತ್ತಿಲ್ಲ.
ಹೌದು ತಾಲೂಕಿನ ನಾಗರಹಾಳ ಪಶು ಆಸ್ಪತ್ರೆ ವ್ಯಾಪ್ತಿಗೆ ಒಳಪಡುವ ಹಲ್ಕಾವಟಗಿ, ಅಂಕನಾಳ, ಉಪನಾಳ, ಕಮಲದಿನ್ನಿ, ರಾಂಪೂರ, ನವಲಿ, ನರಕಲದಿನ್ನಿ, ಸಜ್ಜಲಗುಡ್ಡ, ತುಂಬಲಗಡ್ಡಿ, ತೊಂಡಿಹಾಳ, ಪಲಗಲದಿನ್ನಿ ಗ್ರಾಮಗಳಲ್ಲಿ ಚರ್ಮ ಗಂಟು ರೋಗಕ್ಕೆ ರಾಸುಗಳು ಬಲಿಯಾಗುತ್ತಿವೆ.
ಈಗಾಗಲೇ ನಾಗರಹಾಳ ಪಶು ಆಸ್ಪತ್ರೆ ವ್ಯಾಪ್ತಿಯಲ್ಲಿ 3 ಜಾನುವಾರುಗಳು ಮೃತಪಟ್ಟಿದ್ದು, 11 ಜಾನುವಾರುಗಳು ಚರ್ಮ ಗಂಟು ರೋಗದಿಂದ ನರಳುತ್ತಿವೆ.
ಇತ್ತ ಪಶು ವೈಧ್ಯಕೀಯ ಸಿಬ್ಬಂದಿಗಳು ಚಿಕಿತ್ಸೆ ನೀಡಿದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಕಳೆದ ಒಂದು ತಿಂಗಳಿಂದ ಪಶು ವೈಧ್ಯ ಪರೀಕ್ಷಕರು ಹಾಗೂ ಸಿಬ್ಬಂದಿ ರಾಸುಗಳಿಗೆ ಚಿಕಿತ್ಸೆ ಮುಂದುವರೆಸಿದ್ದಾರೆ.
ಕೃಷಿಗೆ ಆಸರೆಯಾಗಿರುವ ಹಸುಗಳು ಕಣ್ಮುಂದೆಯೇ ಸಾವೊನ್ನೊಪ್ಪುತ್ತಿರುವದನ್ನು ನೋಡಿ ರೈತರು ದಿಕ್ಕು ತೋಚದೆ ಕಂಗಾಲಾಗಿದ್ದಾರೆ.