ಅಫಜಲಪುರ: ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿರುವ ರಂಜಾನ್ ಹಾಗೂ ಬಸವೇಶ್ವರ ಜಯಂತಿಯನ್ನು ಸರಳವಾಗಿ ಆಚರಿಸುವ ಮೂಲಕ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಸಿ.ಪಿ.ಐ ಜಗದೇವಪ್ಪ ಪಾಳಾ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ರಂಜಾನ್ ಹಾಗೂ ಬಸವ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ಶಾಂತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಸೌಹಾರ್ದಯುತ ವಾತಾವರಣವಿದ್ದು ಏ. 3ರ ಮಂಗಳವಾರದಂದು ರಂಜಾನ್ ಹಾಗೂ ಬಸವ ಜಯಂತಿ ಆಚರಣೆ ಏಕಕಾಲಕ್ಕೆ ಬಂದಿದೆ. ಹೀಗಾಗಿ ಹಿಂದೂ-ಮುಸ್ಲಿಂ ಸಮುದಾಯದ ಮುಖಂಡರು ಹಬ್ಬ ಆಚರಣೆಗೆ ಮುಂದೆ ನಿಂತು ಸರಳವಾಗಿ ಆಚರಿಸುವ ಮೂಲಕ ಯಶಸ್ಸಿಗೆ ಕಾರಣರಾಗಬೇಕು.
ಹಬ್ಬಗಳು ಸುಗಮವಾಗಿ ನಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಬಂದೋಬಸ್ತ್ ಕಲ್ಪಿಸಲಾಗುವುದು ಹಾಗೂ ಸಮಾಜದಲ್ಲಿ ಶಾಂತಿ ಕದಡುವವರ ವಿರುದ್ಧ ಸೂಕ್ತ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು. ಅಲ್ಲದೆ ತಜ್ಞರ ವರದಿಯ ಪ್ರಕಾರ 4 ನೇ ಅಲೆಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಸರ್ಕಾರ ಮತ್ತು ಜಿಲ್ಲಾಡಳಿತದ ಆದೇಶಗಳನ್ನು ಕ್ರಮವಾಗಿ ಪಾಲಿಸಲು ಸೂಚಿಸಿದರು.
ಶಾಂತಿ ಸಭೆ ಉದ್ದೇಶಿಸಿ ಮಕ್ಬೂಲ್ ಪಟೇಲ್, ಮಂಜೂರ್ ಅಹ್ಮದ್ ಪಟೇಲ್, ಚಂದಪ್ಪ ಕರಜಗಿ, ಪಾಶಾ ಮಣೂರ, ಶಂಕರ ಮ್ಯಾಕೇರಿ, ರಾಜು ಆರೇಕರ, ಮಹಾಂತೇಶ ಬಡದಾಳ ಮಾತನಾಡಿ ತಾಲೂಕಿನಲ್ಲಿ ಎಲ್ಲ ಧರ್ಮದ ನಾಗರಿಕರು ಸಹಬಾಳ್ವೆಯಿಂದ ಸೌಹಾರ್ದತೆ ಕಾಪಾಡಿಕೊಂಡಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆಯ ಸೂಚನೆ ಮತ್ತು ಸರ್ಕಾರದ ಆದೇಶಗಳನ್ನು ನಿಯಮಾನುಸಾರ ಪಾಲಿಸಿ ಹಬ್ಬಗಳನ್ನು ಸರಳವಾಗಿ ಆಚರಿಸುವುದಾಗಿ ತಿಳಿಸಿದರು.
ಸಭೆಯ ನೇತೃತ್ವವನ್ನು ಪಿ.ಎಸ್.ಐ ವಿಶ್ವನಾಥ ಮುದರಡ್ಡಿ ವಹಿಸಿಕೊಂಡರು. ಕ್ರೈಂ ಪಿ.ಎಸ್.ಐ ದೇವಿಂದ್ರ ರೆಡ್ಡಿ
ಹಾಜರಿದ್ದರು.
ಈ ಸಂದರ್ಭದಲ್ಲಿ ಪ್ರಮುಖರಾದ ಮಳೇಂದ್ರ ಡಾಂಗೆ, ಚಂದ್ರಕಾಂತ ನಿಂಬಾಳ, ಶಿವಪುತ್ರಪ್ಪ ಸಂಗೋಳಗಿ, ನಬಿಲಾಲ ಮಾಶಾಳಕರ, ಶ್ರೀಶೈಲ ಬಳೂರ್ಗಿ, ಸುನೀಲ ಶೆಟ್ಟಿ, ಮಹಾಂತೇಶ ಬಳೂಂಡಗಿ, ಸದಾಶಿವ ಗೌರ, ಸುಭಾಷ ತೇಲಿ ಸೇರಿದಂತೆ ವಿವಿಧ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.