ಸರಕಾರಿ ಎಂ ಪಿ ಎಸ್ ಶಾಲೆಯ ವಿದ್ಯಾರ್ಥಿನಿಯರಿಂದ ಸಚಿವ ಎಮ್ ಬಿ ಪಾಟೀಲ ಅವರಿಗೆ ರಕ್ಷಾ ಬಂಧನ..
ವಿಜಯಪುರ: ತಿಕೋಟಾ ತಾಲೂಕಿನ ಹೊನವಾಡ ಗ್ರಾಮಸ್ಥರು ಸರಕಾರಿ ಎಂ.ಪಿ.ಎಸ್ ಶಾಲೆಯನ್ನು ಸಿ.ಎಸ್.ಆರ್ ಅನುದಾನದಡಿ ಹಿರಿಯ ಪ್ರಾಥಮಿಕ ಶಾಲೆಯನ್ನು ಪ್ರೌಢಶಾಲೆಯನ್ನಾಗಿ ಉನ್ನತಿಕರಿಸಲು ಸರಕಾರ ಆದೇಶ ಹೊರಡಿಸಿದೆ. ಈ ಹಿನ್ನೆಲಯಲ್ಲಿ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಇಂದು ಶನಿವಾರ ನಗರದಲ್ಲಿರುವ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರ ಗೃಹ ಕಚೇರಿಗೆ ಆಗಮಿಸಿ ಕೃತಕ್ಞತೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು, ಶಾಲೆಯನ್ನು ಉನ್ನತೀಕರಿಸಿರುವುದು ಸಂತಸ ತಂದಿದೆ. ಇದರಿಂದ ನಮ್ಮೂರಿನಲ್ಲಿಯೇ ಉತ್ತಮ ಶಿಕ್ಷಣ ಪಡೆಯಲು ಅನುಕೂಲವಾಗಲಿದೆ. ಬಹುದಿನಗಳ ಬೇಡಿಕೆ ಈಡೇರಿದ ಹಿನ್ನೆಲೆಯಲ್ಲಿ ತುಂಬಾ ಸಂತೋಷವಾಗಿದೆ ಎಂದು ಹೇಳಿದರು.
ನಂತರ ಪುಷ್ಪ ಮತ್ತು ಸಿಹಿ ನೀಡಿ ಕೃತಜ್ಞತೆ ಸಲ್ಲಿಸಿದರು. ಅಲ್ಲದೇ, ರಾಖಿ ಕಟ್ಟಿ ರಕ್ಷಾ ಬಂಧನ ಹಬ್ಬದ ಶುಭಾಷಯ ಕೋರಿದರು.
ಈ ಸಂದರ್ಭದಲ್ಲಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಸೀತಾರಾಮ ನರಳೆ, ತಾ. ಪಂ. ಮಾಜಿ ಅಧ್ಯಕ್ಷ ಸಿದ್ದು ಬೆಳಗಾವಿ, ಮುಖಂಡರಾದ ರಾಮಗೊಂಡ ಚಾವರ, ಸುರೇಶಗೌಡ ಪಾಟೀಲ, ಸಾಬು ಖಂಡೇಕಾರ, ಸುರೇಶ ಜಾನಾಯಿ, ವಿನೋದ ಕೋಟಿ, ಬೀರಪ್ಪ ಖಂಡೇಕಾರ, ಬಸವರಾಜ ಕಾತ್ರಾಳ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.