ರಾಗಂ ಕನ್ನಡದ ಬಹುಮುಖ ಪ್ರತಿಭೆ: ಸಾಹೇಬಗೌಡ ಬಿರಾದಾರ
ಇಂಡಿ: ಭಾಷಾಂತರಕಾರರಾಗಿ ಜಾಗತಿಕ ಸಾಹಿತ್ಯದ ಸಂವೇದನೆಗಳನ್ನು ಕನ್ನಡ ಭಾಷಾ ಭೂಮಿಕೆಯಲ್ಲಿ ಹಿಡಿದಿಟ್ಟಿರುವ ರಾಗಂ ಜಗತ್ತಿನ ಶ್ರೇಷ್ಠ ಭಾಷಣಗಳ ಸತ್ವವನ್ನು ಕನ್ನಡಿಗರ ಪ್ರಜ್ಞೆಗೆ ಮುಟ್ಟಿಸಿದ ತೀಕ್ಷ್ಣ ವೈಚಾರಿಕತೆಯ ಬುದ್ಧಿಜೀವಿಯಾಗಿದ್ದಾರೆ ಎಂದು ತಾಳಿಕೋಟೆ ಸಾಹಿತಿ ಸಾಹೇಬಗೌಡ ಬಿರಾದಾರ ಹೇಳಿದರು.
ಅವರು ಶನಿವಾರದಂದು ಭೀಮಾಂತರಂಗ ಆನ್ ಲೈನ್ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಜಗಲಿ ಕೇಂದ್ರದ ವತಿಯಿಂದ ಹಮ್ಮಿಕೊಂಡ ‘ರಾಗಂ ಬದುಕು ಬರಹ’ ಕುರಿತ ಆನ್ ಲೈನ್ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ
ಮಾತನಾಡಿದರು.
ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಸಾಹಿತ್ಯ
ಕ್ಷೇತ್ರದಲ್ಲಿ ಕೊಂಡಿಯನ್ನು ಬೆಸೆದ ಲೇಖಕ ರಾಗಂ ಅವರು
ಗಡಿಭಾಗದ ಚಡಚಣದ ಗರಿಮೆಯನ್ನು ಸಾಹಿತ್ಯಿಕವಾಗಿ ಎತ್ತರೆಕ್ಕೆರಿಸಿದ್ದಾರೆ. ಪ್ರಾದೇಶಿಕತೆಯ ನೋವು-ನಲಿವುಗಳನ್ನು ತಮ್ಮ ಕೃತಿಗಳಲ್ಲಿ ಹಿಡಿದಿಡುವ ಅವರ ಚಾಣಾಕ್ಷತನ ಎದ್ದು ಕಾಣುತ್ತದೆ ಎಂದು ಹೇಳಿದರು.
ಮೂಲತಃ ಆಂಗ್ಲ ಭಾಷಾ ಪ್ರಾಧ್ಯಾಪಕರಾಗಿ ವೃತ್ತಿ ಗೈಯುತ ಜೊತೆಗೆ ಕಾವ್ಯ, ಕಥೆ, ಕಾದಂಬರಿ, ನಾಟಕ, ಜೀವನ ಚರಿತ್ರೆ, ವಿಮರ್ಶೆ, ಭಾಷಾಂತರ, ಅಂಕಣ ಬರಹ, ಪತ್ರ ಸಾಹಿತ್ಯ, ವಿಚಾರ ಸಾಹಿತ್ಯ, ಸಂಪಾದನೆ, ಸಂಪಾದನಾ ಸಂಚಿಕೆಗಳು, ಇಂಗ್ಲಿಷ್ ಸಾಹಿತ್ಯ, ಸಂಶೋಧನೆ, ಸಿನಿಮಾ ಸಾಹಿತ್ಯ ಹಾಗೂ ಲಲಿತ ಪ್ರಬಂಧ ಎಂಬ ಶೀರ್ಷಿಕೆಗಳಡಿ ಸುಮಾರು ನೂರು ಕೃತಿಗಳ ರಚನೆ ರಾಗಂ ಅವರ ಪ್ರಬುದ್ಧತೆಯ ಸಂವೇದನಾಶೀಲತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದರು.
ಇಂಡಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ಮಾತನಾಡಿ, ಬದುಕಿನ ಒಳ-ಹೊರಗುಗಳನ್ನು ಅರಿಯುವ ನಿಟ್ಟಿನಲ್ಲಿ ರಾಗಂ ಅವರ ಲೇಖನಿ ಬಹು ಅದ್ಭುತವಾದುದು. ರಾಗಂ ಅವರ ಓದಿನ ವ್ಯಾಪ್ತಿ ವಿಸ್ತಾರವಾದುದು. ಓದನ್ನು ಪ್ರೀತಿಸುವ ಸಹೃದಯತೆ ಅವರಲ್ಲಿದೆ ಎಂದು ಹೇಳಿದರು.
ಡಾ. ಡಿ ಎನ್ ಅಕ್ಕಿ,ಡಾ. ಎಂ ಎಂ ಪಡಶೆಟ್ಟಿ, ರಾಜಶೇಖರ ಮಠಪತಿ, ಪದ್ಮಶ್ರೀ ಮಠಪತಿ, ಗೀತಯೋಗಿ, ಚಿದಂಬರ ಬಂಡಗರ, ಸಂತೋಷ ಬಂಡೆ, ವೈ ಜಿ ಬಿರಾದಾರ, ಶ್ರೀಧರ ಹಿಪ್ಪರಗಿ, ಬಸವರಾಜ ಕಿರಣಗಿ, ರಾಚು ಕೊಪ್ಪ, ವಿದ್ಯಾ ಕಲ್ಯಾಣಶೆಟ್ಟಿ, ಶಿಲ್ಪಾ ಭಸ್ಮೆ, ನಿಂಗಣ್ಣ ಬಿರಾದಾರ,
ಎ ಸಿ ಹುಣಸಗಿ, ಡಾ ರಾಜಶ್ರೀ ಮಾರನೂರ, ರವಿ ಅರಳಿ, ಡಾ ಕಾಂತು ಇಂಡಿ, ಆರ್ ವ್ಹಿ ಪಾಟೀಲ, ಸಂಗನಗೌಡ ಹಚ್ಚಡದ, ಅನಿತಾ ಅಳಗುಂಡಗಿ, ಅಣ್ಣರಾಯ ಗೂಗದಡ್ಡಿ
ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಶಿಕ್ಷಕಿ ಬಿ ಸಿ ಭಗವಂತಗೌಡರ ಸ್ವಾಗತಿಸಿ,ಪರಿಚಯಿಸಿದರು. ಶಿಕ್ಷಕಿ ಸರೋಜಿನಿ ಮಾವಿನಮರ ನಿರೂಪಿಸಿದರು.