ಸಿರುಗುಪ್ಪ: ನಗರದ ತಾಲೂಕು ಕಚೇರಿಯಲ್ಲಿ ಮಾಲೀಕರ ಸಂಘದ ವತಿಯಿಂದ ಕೇಂದ್ರ ಸರ್ಕಾರದ ಜಿಎಸ್‌ಟಿ ನೀತಿಯನ್ನು ವಿರೋಧಿಸಿ ತಹಸೀಲ್ದಾರ್ ಎನ್.ಆರ್. ಮಂಜುನಾಥ ಸ್ವಾಮಿಯವರಿಗೆ ಮನವಿ ಸಲ್ಲಿಸಲಾಯಿತು.
ತಾಲೂಕ ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಎನ್. ಜಿ. ಬಸವರಾಜಪ್ಪ ಮಾತನಾಡಿ ಆಹಾರ ಧಾನ್ಯಗಳಾದ ಅಕ್ಕಿ, ಜೋಳ, ರಾಗಿ ಮುಂತಾದವುಗಳನ್ನು ಬಡ ಕೂಲಿಕಾರ್ಮಿಕರು, ಕಡು ಬಡವರು, ಮತ್ತು ಮಧ್ಯಮ ವರ್ಗದವರು ಪ್ರತಿ ನಿತ್ಯದ ಜೀವನ ನಿರ್ವಹಣೆಗೆ ಬಳಸುವ ಅವಶ್ಯ ಪದಾರ್ಥಗಳಾಗಿದ್ದು, ಕೇಂದ್ರ ಸರ್ಕಾರವು ಜೂನ್ 28 29 ರಂದು ಜಿ ಎಸ್ ಟಿ ಮಂಡಳಿಯಿಂದ ಆಹಾರಧಾನ್ಯಗಳ ಮೇಲೆ ತೆರಿಗೆ ಹೇರಿರುವ ಸರ್ಕಾರದ ನೀತಿಯನ್ನು ಖಂಡಿಸಲು ಕರ್ನಾಟಕ ರಾಜ್ಯಕ್ಕೆ ಗಿರಣಿಗಳ ಮಾಲೀಕರ ಸಂಘದ ರಾಜ್ಯ ಸಂಘಟನೆಯ ಕರೆ ಮೇರೆಗೆ ಎಲ್ಲಾ ಅಕ್ಕಿ ಗಿರಣಿಗಳನ್ನು ಬಂದ್ ಮಾಡಿ ಆಹಾರ ಧಾನ್ಯಗಳ ಮಾರಾಟದ ವಹಿವಾಟನ್ನು ನಿಲ್ಲಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಸರ್ಕಾರವು ನಿರ್ಧಾರವನ್ನು ಹಿಂಪಡೆಯುವವರೆಗೂ ಹೋರಾಟ ಮುಂದುವರಿಸಲಾಗುವುದು ಎಂದು ತಿಳಿಸಿದರು.
ಇದೆ ವೇಳೆ ಉಪಾಧ್ಯಕ್ಷ ರಾಗಿ ಸುಬ್ಬಯ್ಯ ಶೆಟ್ಟಿ ಮಾಲೀಕರಾದ ಮುತ್ತಾಲಯ್ಯ ಶೆಟ್ಟಿ, ಬಿ.ಜೆ. ಮಧುಸೂದನ ಶೆಟ್ಟಿ, ಶಿವಕುಮಾರ್, ಜಯಂತಿ ರಾಜ್, ಬಿ.ಜಿ. ಸುಧಾಕರ ರೆಡ್ಡಿ, ಬಿ.ನಾಗರಾಜ, ಸಲೀಂ, ಶಬರೀಶ, ಸತ್ಯನಾರಾಯಣ, ಸಾಲ್ಗುಂದಿ ರಮೇಶ, ಚಾಗಿ ರಾಘು, ಬಿ ಎಂ ಶಿವಕುಮಾರ್ ಸ್ವಾಮಿ, ಹಾಗೂ ಇನ್ನಿತರರು ಇದ್ದರು.