ಲಿಂಗಸಗೂರು: ತಾಲೂಕಿನಾದ್ಯಂತ ಖಾಸಗಿ ಶಿಕ್ಷಣ ಸಂಸ್ಥೆಗಳು ವ್ಯಾಪಾರ ಕೇಂದ್ರಗಳಾಗಿ ಮಾರ್ಪಟ್ಟಿದ್ದು, ಅಂತಹ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಮ್ಮ ಕರ್ನಾಟಕ ಸೇನೆ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಲಿಂಗಸಗೂರು ತಾಲೂಕಿನ ಖಾಸಗಿ ಶಾಲೆಗಳು ವಿದ್ಯಾರ್ಥಿಗಳ ಪೋಷಕರಿಂದ ಮನಬಂದಂತೆ ಡೋನೆಶನ್ ಪಡೆಯುತ್ತಿವೆ. ಇನ್ನು ಖಾಸಗಿ ಶಾಲೆಗಳು ಹೇಳಿದ ಅಂಗಡಿಗಳಿಗೆ ತೆರಳಿ ಪುಸ್ತಕ ಹಾಗೂ ಬಟ್ಟೆಗಳನ್ನು ಖರೀದಿಸಬೇಕು ಎಂಬ ನಿಯಮ ಮಾಡಿದ್ದಾರೆ. ಅಲ್ಲದೆ ರಿಯಲ್ ಎಸ್ಟೇಟ್ ಉದ್ದಿಮೆದಾರರು ತಮ್ಮ ಬ್ಲಾಕ್ ಮನಿಯನ್ನು ವೈಟ್ ಮನಿಯನ್ನಾಗಿ ಪರಿವರ್ತಿಸಿಕೊಳ್ಳಲು ಶಾಲೆಗಳನ್ನು ಪ್ರಾರಂಭಿಸಿ ವ್ಯಾಪಾರದ ಸರಕನ್ನಾಗಿ ಮಾಡಿಕೊಂಡಿದ್ದಾರೆ. ಕೂಡಲೇ ಶಿಕ್ಷಣಾಧಿಕಾರಿಗಳು ಎಚ್ಚೆತ್ತು ಖಾಸಗಿ ಶಾಲೆಗಳಿಗೆ ತೆರಳಿ ಶಿಕ್ಷಣ ಕ್ಷೇತ್ರವನ್ನು ವ್ಯಾಪಾರ ಕೇಂದ್ರವಾಗಿ ಮಾಡಿಕೊಂಡವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.