ಲಿಂಗಸಗೂರು : ಬರಗಾಲದ ಮಧ್ಯೆ ಕಷ್ಟಪಟ್ಟು ಬೆಳೆದ ಕಬ್ಬಿನ ಬೆಳೆಯಿಂದ, ಒಳ್ಳೆಯ ಆದಾಯದ ನಿರೀಕ್ಷೆಯಲ್ಲಿ ಇದ್ದ ರೈತನಿಗೆ ಜೆಸ್ಕಾಂ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ, ಇದೀಗ ರೈತನ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಮಾಡಿದ್ದಾರೆ. ಜೆಸ್ಕಾಂ ಇಲಾಖೆ ಹಾಕಿದ್ದ ವಿದ್ಯುತ್ ತಂತಿ ರೈತನ ಬೆಳೆಯನ್ನು ಸಂಪೂರ್ಣ ಬಲಿ ಪಡೆದಿದೆ.
ಹೌದು ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಭೋಗಾಪುರ ಗ್ರಾಮದ ರೈತ ವೆಂಕಣ್ಣ ಕೀರ್ದಿ, ತಮ್ಮ 6 ಎಕರೆ ಜಮೀನಲ್ಲಿ ಕಬ್ಬಿನ ಬೆಳೆ ಬೆಳೆದಿದ್ದರು. ಇನ್ನು ಎರಡು ತಿಂಗಳಿಗಳಲ್ಲಿ ಕಬ್ಬು ಕಟಾವು ಮಾಡಬೇಕಿತ್ತು. ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ರೈತನ ಕಬ್ಬಿನ ಬೆಳೆಯನ್ನು, ಜೆಸ್ಕಾಂ ಇಲಾಖೆ ಸುಟ್ಟು ಹಾಕಿದೆ. ಹೌದು ರೈತನ ಕಬ್ಬಿನ ಗದ್ದೆಯ ಮಧ್ಯೆ ಹಾದು ಹೋಗಿದ್ದ, ಲೆವೆನ್ ಕೆವಿ ವಿದ್ಯುತ್ ಮೇನ್ ಲೈನ್, ತುಂಡಾಗಿ ಬಿದ್ದ ಹಿನ್ನೆಲೆ, ಕಬ್ಬಿನ ಗದ್ದೆಯಲ್ಲಿ ಬೆಂಕಿ ಹೊತ್ತಿಕೊಂಡು, ಆರು ಎಕರೆಯಲ್ಲಿ ನಾಲ್ಕು ಎಕರೆಯಷ್ಟು ಕಬ್ಬಿನ ಬೆಳೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಇನ್ನುಳಿದ ಎರಡು ಎಕರೆಯಲ್ಲಿ ಅರೆಬರಿಯಾಗಿ ಸುಟ್ಟು ಹೋಗಿದ್ದು, ರೈತ ಸಂಪೂರ್ಣ ನಷ್ಟ ಹೊಂದಿ ಕಂಗಲಾಗಿದ್ದಾನೆ. ರೈತ ವೆಂಕಣ್ಣ ಈಗಾಗಲೇ ಕಬ್ಬಿನ ಬೆಳೆಗೆ 5-6 ಲಕ್ಷ ರೂ. ಖರ್ಚು ಮಾಡಿ ಬೆಳೆ ಬೆಳಿದಿದ್ದು, ಇದೀಗ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಇನ್ನು ಕಬ್ಬಿನ ಗದ್ದೆಯಲ್ಲಿ ಕಳೆದ 45 ವರ್ಷಗಳ ಹಿಂದೆ ಅಳವಡಿಸಲಾಗಿತ್ತು, ಈ ವಿದ್ಯುತ್ ಕಂಬ ಮತ್ತು ವಯರ್ ಅನ್ನು ದುರಸ್ತಿ ಮಾಡುವಂತೆ ಕಳೆದ ಮೂರು ವರ್ಷಗಳಿಂದ ರೈತ ವೆಂಕಣ್ಣ ಜೆಸ್ಕಾಂ ಅಧಿಕಾರಿಗಳಿಗೆ ದುಂಬಾಲು ಬಿದ್ದಿದ್ದರೂ ಈ ಬಗ್ಗೆ ಗಮನಹರಿಸಿರಲಿಲ್ಲ ಇಲಾಖೆ ಅಧಿಕಾರಿಗಳು. ಇದೇ ನಿರ್ಲಕ್ಷ್ಯದಿಂದ ಇದೀಗ ರೈತ ನಾಲ್ಕು ಎಕರೆಯಲ್ಲಿ ಬೆಳೆದ ಕಬ್ಬು ಕಳೆದುಕೊಂಡಿದ್ದಾನೆ. ಇದಕ್ಕೆ ಯಾರು ಹೊಣೆ, ಖರ್ಚು ವೆಚ್ಚ ಯಾರು ಬರಿಸುತ್ತಾರೆ ಎಂಬುದು ಇದೀಗ ರೈತನ ಪ್ರಶ್ನೆಯಾಗಿದೆ. ಘಟನೆ ಬಗ್ಗೆ ಅಧಿಕಾರಿಗಳನ್ನು ಕೇಳಲು ಕರೆ ಮಾಡಿದರೆ ಅಧಿಕಾರಿಗಳ ಫೋನ್ ಗಳು ಸ್ವಿಚ್ ಆಫ್. ಇದೀಗ ರೈತ ಸಂಕಷ್ಟದಲ್ಲಿದ್ದು, ಅಧಿಕಾರಿಗಳು ತಮ್ಮ ತಪ್ಪು ಅರಿತುಕೊಂಡು ರೈತನ ನೆರವಿಗೆ ಬರುತ್ತಾರಾ ಕಾದುನೋಡಬೇಕಿದೆ.