ಆರೋಗ್ಯಕರ ಭವಿಷ್ಯಕ್ಕಾಗಿ ಮಾಲಿನ್ಯ ನಿಯಂತ್ರಣ ಅಗತ್ಯ-
ಸಂತೋಷ ಬಂಡೆ
ಇಂಡಿ: ಗಾಳಿ, ನೀರು, ಮಣ್ಣಿನ ಮೇಲೆ ಪರಿಣಾಮ ಬೀರುವ ಮಾಲಿನ್ಯಕಾರಕಗಳನ್ನು ಕಡಿಮೆ ಮಾಡಲು ಪರಿಸರ ಸ್ನೇಹಿ ಅಭ್ಯಾಸಗಳನ್ನು ರೂಢಿಗೊಳಿಸಿಕೊಳ್ಳುವ ಅಗತ್ಯತೆ ಇದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಸೋಮವಾರದಂದು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನದ ನಿಮಿತ್ತ ಹಮ್ಮಿಕೊಂಡ ‘ಮಾಲಿನ್ಯ ನಿಯಂತ್ರಣದಲ್ಲಿ ನಮ್ಮ ಪಾತ್ರ’ ಕುರಿತ ಚರ್ಚಾಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ಶುದ್ಧ ಗಾಳಿ, ಹಸಿರು ಭೂಮಿಯ ಮೂಲಕ ಸುಸ್ಥಿರ ಜೀವನದತ್ತ ಹೆಜ್ಜೆ ಹಾಕಲು ಪರಿಸರ ಮಾಲಿನ್ಯ ನಿಯಂತ್ರಣದ ಸಂಕಲ್ಪ ಮಾಡಬೇಕು. ನೀರಿನ ವ್ಯರ್ಥವನ್ನು ತಪ್ಪಿಸಬೇಕು.
ಸಾರ್ವಜನಿಕ ಸಾರಿಗೆ ಬಳಸುವ ಮೂಲಕ ವಾಯು ಮಾಲಿನ್ಯವನ್ನು ನಿಯಂತ್ರಿಸಬೇಕಿದೆ. ಇಲ್ಲದಿದ್ದರೆ ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರ ಸಿಗುವುದು ಕಷ್ಟ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಕೆಬಿಎಸ್ ಶಾಲಾ ಶಿಕ್ಷಕಿ ಎಫ್ ಎ ಹೋರ್ತಿ ಮಾತನಾಡಿ, ಮಿತಿ ಮೀರಿದ ಪ್ಲಾಸ್ಟಿಕ್ ಬಳಕೆ ಮಾಲಿನ್ಯಕ್ಕೆ ಮುಖ್ಯ ಕಾರಣವಾಗಿದ್ದು, ಪರಿಸರ ಸ್ನೇಹಿ ಬಟ್ಟೆ ಚೀಲ ಬಳಸುತ್ತಾ, ಎಸೆಯುವ ಸಂಸ್ಕೃತಿ ಬದಲಾಗಿ ರಿಪೇರಿ ಸಂಸ್ಕೃತಿಯನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಶಿಕ್ಷಕಿ ಎನ್ ಬಿ ಚೌಧರಿ ಮಾತನಾಡಿ, ಸಾಧ್ಯವಾದಾಗಲೆಲ್ಲಾ ರಾಸಾಯನಿಕ ಮುಕ್ತ, ಸಾವಯವ ಹಾಗೂ ಸಸ್ಯಮೂಲದ ಆಹಾರ ಪದಾರ್ಥಗಳನ್ನೇ ಬಳಸಿದಾಗ ಪರಿಸರಕ್ಕೂ ನಿರಾಳ, ನಮ್ಮ ಆರೋಗ್ಯಕ್ಕೂ ವರದಾನ. ಸ್ವಚ್ಛ ಸುಂದರ ಪರಿಸರ ನಮ್ಮ ಆದ್ಯತೆಯಾಗಲಿ ಎಂದು ಹೇಳಿದರು.
ಶಿಕ್ಷಕಿ ಎಸ್ ಪಿ ಪೂಜಾರಿ, ಅತಿಥಿ ಶಿಕ್ಷಕಿ ಅಲ್ಫಿಯಾ ಅಂಗಡಿ ಸೇರಿದಂತೆ ಶಾಲಾ ಮಕ್ಕಳು ಭಾಗವಹಿಸಿದ್ದರು.


















