ವಕ್ಫ್ ಸಚಿವರ ಮುಖಾಂತರ ರೈತರ ವಿರುದ್ಧ ದ್ವೇಷದ ರಾಜಕಾರಣ : ಎ.ಎಸ್.ಪಾಟೀಲ (ನಡಹಳ್ಳಿ)
ವರದಿ : ಬಸವರಾಜ ಕುಂಬಾರ ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಮುಡಾ ಹಗರಣದಿಂದ ನಲುಗಿ ಹೋಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬುದ್ದಿಭ್ರಮಣೆಯಾಗಿದೆ. ವಕ್ಫ್ ಸಚಿವರ ಮುಖಾಂತರ ರೈತರ ವಿರುದ್ಧ ದ್ವೇಷದ ರಾಜಕಾರಣ ಪ್ರಾರಂಭಿಸಿದ್ದಾರೆ. ರಾಜ್ಯದಲ್ಲಿರುವುದು ರೈತವಿರೋಧಿ ಸರ್ಕಾರವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲಿದ್ದು ರೈತರು ಎದೆಗುಂದಬೇಕಿಲ್ಲ ಎಂದು ಮಾಜಿ ಶಾಸಕ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ (ನಡಹಳ್ಳಿ) ಹೇಳಿದರು.
ಇಲ್ಲಿನ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಕುಂಟೋಜಿ, ಬಿದರಕುಂದಿ ರೈತರು ಪ್ರಾರಂಭಿಸಿರುವ ಧರಣಿ ಸತ್ಯಾಗ್ರಹದಲ್ಲಿ ಶುಕ್ರವಾರ ಪಾಲ್ಗೊಂಡು, ಬೆಂಬಲ ಸೂಚಿಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಇತ್ತೀಚಿನ ದಿನಗಳಲ್ಲಿ ತೆಗೆದುಕೊಳ್ಳುತ್ತಿರುವ ತೀರ್ಮಾನಗಳು ಆಶ್ಚರ್ಯ ಉಂಟು ಮಾಡುತ್ತಿವೆ. ರೈತರ ಮೇಲೆ ದ್ವೇಷದ ರಾಜಕಾರಣ ಮಾಡಬಾರದು ಎಂದರು.
ಸಚಿವ ಜಮೀರ್‌ಅಹ್ಮದ್ ವಿಜಯಪುರದಲ್ಲಿ ಮೀಟಿಂಗ್ ಮಾಡಿ ಮುಖ್ಯಮಂತ್ರಿ ಆದೇಶವಿರುವುದರಿಂದ ರೈತರ, ಮಠಗಳ, ದೇವಸ್ಥಾನಗಳ, ಶಾಲೆಗಳ ಆಸ್ತಿಗಳ ಪಹಣಿಗಳಲ್ಲಿ ಮುಲಾಜಿಲ್ಲದೆ ವಕ್ಫ್ ಬೋರ್ಡ, ಕರ್ನಾಟಕ ಸರ್ಕಾರ ಎಂಟ್ರಿ ಮಾಡಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಜಿಲ್ಲಾಧಿಕಾರಿಗೆ ಆದೇಶಿಸಿದ್ದರು. ಆದೇಶ ಪಾಲಿಸದಿದ್ದರೆ ಕ್ರಮ ಕೈಕೊಳ್ಳುವುದಾಗಿ ಬೆದರಿಸಿದ್ದರು. ಆದೇಶದ ಪ್ರತಿಯನ್ನು ಜಿಲ್ಲಾಧಿಕಾರಿಯು ಸಂಸದ ಗೋವಿಂದ ಕಾರಜೋಳ ನೇತೃತ್ವದ ಸತ್ಯಶೋಧನಾ ಸಮಿತಿಗೆ ಕೊಟ್ಟಿದ್ದಾರೆ. ಇದನ್ನು ಮುಖ್ಯಮಂತ್ರಿಯವರು ಸಚಿವರ ಮೂಲಕ ಮಾಡಿಸಿದ್ದಾರೆ ಎಂದು ದೂರಿದರು.
ಕಳೆದ ಎರಡು ತಿಂಗಳಲ್ಲಿ ರಾಜ್ಯದ ಶೇ.೩೮ರಷ್ಟು ಆಸ್ತಿ ವಕ್ಫ್ಗೆ ಹೆಚ್ಚಾಗಿದೆ. ಬಿಜೆಪಿ, ಮಠಾಧೀಶರು, ರೈತರು ರಾಜ್ಯಾದ್ಯಂತ ಹೋರಾಟ ಪ್ರಾರಂಭಿಸಿದ ಮೇಲೆ ನಾನು ಹಾಗೆ ಹೇಳಿಯೇ ಇಲ್ಲ ಎಂದು ಮುಖ್ಯಮಂತ್ರಿ ಹೇಳಿಕೆ ಕೊಟ್ಟರು. ರೈತರ ಹೊಲಗಳಲ್ಲಿ ವಕ್ಫ್ ಎಂಟ್ರಿ ಆಗಿದ್ದರೆ ರದ್ದು ಮಾಡಲು ಆದೇಶ ಮಾಡುತ್ತೇನೆ ಎಂದಿದ್ದರು. ಆದರೆ ಡಿಸಿ, ತಹಶೀಲ್ದಾರ್ ರೈತರು ಧರಣಿ ಕುಳಿತರೂ ಸ್ಪಂಧಿಸುತ್ತಿಲ್ಲ. ಧರಣಿ ಕುಳಿತವರನ್ನು ಕನಿಷ್ಠ ಸೌಜನ್ಯಕ್ಕೂ ಭೇಟಿ ಮಾಡಿ ಅಹವಾಲು ಆಲಿಸಿಲ್ಲ. ಇದರರ್ಥ ಏನು ಎಂದು ಕಿಡಿ ಕಾರಿದರು.
ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್ ಅವರು ರೈತರ ಮನವಿಗಳನ್ನು ಒಯ್ದಿದ್ದಾರೆ. ಸಂಸತ್ ಸ್ಪೀಕರ್‌ಗೆ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ರೈತರು ಹೆದರುವ ಅವಶ್ಯಕತೆ ಇಲ್ಲ. ಕಾಂಗ್ರೆಸ್‌ಗೆ ಓಟ್ ಹಾಕಿ ಬಹಳ ದೊಡ್ಡ ತಪ್ಪು ಮಾಡಿರುವ ಮತದಾರರು ಅದರ ಫಲವನ್ನೀಗ ಅನುಭವಿಸುತ್ತಿದ್ದಾರೆ. ಕರ್ನಾಟಕದಲ್ಲಿ ರೈತರು ಯಾಕಪ್ಪಾ ಈ ಪಾಪದ ಸರ್ಕಾರ ತಂದಿದ್ದೇವೆ ಎಂದು ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದರು.
ತುಷ್ಟೀಕರಣ ನೀತಿ, ಓಟ್ ಬ್ಯಾಂಕಿಗೋಸ್ಕರ ರೈತರ ಆಸ್ತಿಯನ್ನು ಅತಿಕ್ರಮಣ ಮಾಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಸಚಿವೆ ಶೋಭಾ ಕರಂದ್ಲಾಜೆ, ಕನ್ಹೇರಿಮಠ, ಪಂಚಮಸಾಲಿ ಗುರುಪೀಠದ ಸ್ವಾಮೀಜಿಗಳು, ಶಾಸಕರ ನೇತೃತ್ವದಲ್ಲಿ ನಡೆದ ಹೋರಾಟದ ಆಧಾರದ ಮೇಲೆ ರೈತರಿಗಾದ ಅನ್ಯಾಯ ಸರಿಪಡಿಸುವ ಕೆಲಸವನ್ನು ಮೋದಿ ಸರ್ಕಾರ ಮಾಡುತ್ತದೆ. ರೈತರಿಗೆ ಅನ್ಯಾಯ ಆಗಲು ಬಿಜೆಪಿ, ಮೋದಿ ಸರ್ಕಾರ ಬಿಡುವುದಿಲ್ಲ ಎಂದರು.
ಆಸ್ತಿ ಕಳೆದುಕೊಂಡಿರುವ ಮುದ್ದೇಬಿಹಾಳ ತಾಲೂಕಿನ ರೈತರು ಎರಡು ದಿನದಿಂದ ಹೋರಾಟ ನಡೆಸುತ್ತಿದ್ದಾರೆ. ರೈತರ ಆಸ್ತಿಯಲ್ಲೂ ಲೂಟಿ ಹೊಡೆಯಲು ಸಿದ್ದರಾಗಿದ್ದೀರಾ ಅನ್ನೋ ಪ್ರಶ್ನೆಯನ್ನು ಶಾಸಕರಿಗೂ ಕೇಳ್ತೇವೆ. ಅಧಿಕಾರಿಗಳು ಕರ್ತವ್ಯ ಮರೆತಿದ್ದಾರೆ. ಸಿಎಂ ಹೇಳಿಕೆ ಕೊಟ್ಟಿದ್ದನ್ನು ಅಧಿಕಾರಿಗಳು, ಶಾಸಕರು ರೈತರಿಗೆ ಹೇಳಬೇಕಿತ್ತು. ಈಗಲಾದರೂ ತಹಶೀಲ್ದಾರ್‌ಗೆ ಹೇಳಿ ರೈತರಿಗಾದ ಅನ್ಯಾಯ ಸರಿಪಡಿಸುವ ಕೆಲಸವನ್ನು ಈ ಭಾಗದ ಶಾಸಕರು ಮಾಡಬೇಕು. ಇಲ್ಲವಾದರೆ ಹೊರಾಟ ಬಹಳ ಗಂಭಿರವಾಗಿ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಾಜಿ ಸೈನಿಕ ಕುಂಟೋಜಿಯ ನಾಗಲಿಂಗಯ್ಯ ಮಠ ಮಾತನಾಡಿ, ೪೨ ಅಂಶಗಳಿರುವ ವಕ್ಫ್ ಕಾನೂನು ಕರಾಳ ಶಾಸನವಾಗಿದೆ. ಹೈಕೋರ್ಟನಿಂದ ಆದೇಶ ತಂದರೂ, ಜಿಲ್ಲಾಧಿಕಾರಿ ಪತ್ರದ ಮೂಲಕ ತಿಳಿಸಿದರೂ ಇಲ್ಲಿನ ತಹಶೀಲ್ದಾರ್ ಕ್ರಮ ಜರುಗಿಸುತ್ತಿಲ್ಲ. ೨೪ ರೈತರ ೩೮೦ ಎಕರೆ ಜಮೀನಿನ ಪಹಣಿಗಳಲ್ಲಿ ವಕ್ಪ್, ಕರ್ನಾಟಕ ಸರ್ಕಾರ ಎಂದು ದಾಖಲಾಗಿದೆ. ಇದು ರೈತನಿಗೆ ತಿಳಿಸದೆ ಮಾಡಿರುವ ಬದಲಾವಣೆಯಾಗಿದೆ. ಇದು ಅನ್ನದಾತನ ಬೆನ್ನೆಲುಬು ಮುರಿಯಲು ಹೊರಟಿರುವುದಕ್ಕೆ ಕನ್ನಡಿಯಂತಿದೆ. ನಮ್ಮ ಮನವಿಯನ್ನು ಜೆಪಿಸಿ ಅಧ್ಯಕ್ಷರಿಗೆ ಸಲ್ಲಿಸಿದ್ದೇವೆ. ಇನ್ನೂ ಯಾರಾದರೂ ಇಂಥ ಸಮಸ್ಯೆ ಎದುರಿಸುತ್ತಿದ್ದರೆ ದಾಖಲೆ ನಮಗೆ ಕೊಟ್ಟಲ್ಲಿ ದಿಲ್ಲಿವರೆಗೂ ಅದನ್ನು ತಲುಪಿಸುತ್ತೇವೆ ಎಂದರು.
ಜಿಪಂ ಮಾಜಿ ಸದಸ್ಯ ಗಂಗಾಧರರಾವ್ ನಾಡಗೌಡ (ಮುನ್ನಾಧಣಿ) ಮಾತನಾಡಿ, ಈ ಹೋರಾಟ ಬಹಳ ದಿನಗಳ ಹಿಂದೆಯೇ ಆಗಬೇಕಿತ್ತು. ರೈತರು ಈಗ ಎಚ್ಚರಾಗಿದ್ದಾರೆ. ಮಠಗಳ ಆಸ್ತಿಯೂ ವಕ್ಫ್ನಲ್ಲಿ ಸೇರಿದೆ. ಟೆನೆನ್ಸಿ ಕಾಯ್ದೆಯಡಿ ರೈತರು ತಮ್ಮ ಜಮೀನಿನ ಮಾಲಕರಾಗಬೇಕು. ಕೋರ್ಟ್ ಆದೇಶಕ್ಕೂ ಮನ್ನಣೆ ಇಲ್ಲವೆಂದರೆ ಹಿಂದಿನ ಉದ್ದೇಶ ಸ್ಪಷ್ಟ. ಬೇಡಿಕೆ ಈಡೇರದಿದ್ದರೆ ಹೋರಾಟ ಇನ್ನಷ್ಟು ಉಗ್ರವಾಗುತ್ತದೆ ಎಂದರು.
ಈ ಸಂದರ್ಭದಲ್ಲಿರೈತ ಸಂಘದ ಸಂಗಣ್ಣ ಬಾಗೇವಾಡಿ, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಆರ್.ಬಿರಾದಾರ, ತಾಪಂ ಮಾಜಿ ಅಧ್ಯಕ್ಷ ಮುತ್ತಣ್ಣ ಹುಗ್ಗಿ, ಕುಂಟೋಜಿ ಬಸವೇಶ್ವರ ದೇವಸ್ಥಾನ ಕಮೀಟಿ ಅಧ್ಯಕ್ಷ ಗುರುಲಿಂಗಪ್ಪ ಸುಳ್ಳಳ್ಳಿ, ರವಿ ಜಗಲಿ, ಸಿದ್ದು ಹೆಬ್ಬಾಳ, ಚಂದ್ರಶೇಖರ ಕೋಳೂರ, ಬಸಯ್ಯ ಮಠ, ಸಂಗಣ್ಣ ಕುಂಬಾರ, ಸೋಮಲಿಂಗಪ್ಪ ಗಸ್ತಿಗಾರ, ಹಣಮಂತ ರಮೇಶ ಉಗರಗೋಳ, ಬಸವರಾಜ ಕೋಳೂರ, ಸಿದ್ದರಾಮ ಕೋಳೂರ, ಸದಾನಂದ ರಕ್ಕಸಗಿ, ಪಾಶ್ಯಾಜಾನಿ ಇನಾಮದಾರ, ಸಿದ್ರಾಮ ಹಡಪದ, ನಯೀಮಪಾಶಾ ಇನಾಮದಾರ, ಜ್ಯೋತಿ ಸೊಲ್ಲಾಪುರ, ಮಹಾದೇವಿ ಕೋಳೂರ ಸೇರಿದಂತೆ ಕುಂಟೋಜಿ, ಬಿದರಕುಂದಿ ಗ್ರಾಮದ ನೂರಾರು ರೈತರು ಸೇರಿದಂತೆ ಉಪಸ್ಥಿತರಿದ್ದರು.