ಪಿಂಗಳಿ ವೆಂಕಯ್ಯ ಭಾರತದ ರಾಷ್ಟ್ರಧ್ವಜದ ಸೃಷ್ಟಿಕರ್ತ-
ಸಂತೋಷ ಬಂಡೆ
ಇಂಡಿ: ಅಪ್ರತಿಮ ಬುದ್ಧಿಮತ್ತೆಯ ವೆಂಕಯ್ಯನವರು ಶಿಕ್ಷಣ, ಸಂಶೋಧನೆಗಳಲ್ಲಿ ಸಕ್ರಿಯರಾಗಿ ತಮ್ಮ ಹೆಚ್ಚಿನ ಸಮಯವನ್ನು ಸ್ವಾತಂತ್ರ್ಯ ಹೋರಾಟಕ್ಕಾಗಿ ಮೀಸಲಿಟ್ಟಿದ್ದರು. ಅವರು ಭಾರತದ ರಾಷ್ಟ್ರ ಧ್ವಜದ ಸೃಷ್ಟಿಕರ್ತರಾಗಿದ್ದಾರೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಶನಿವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯಲ್ಲಿ ಪಿಂಗಳಿ ವೆಂಕಯ್ಯನವರ ಜನ್ಮದಿನದ ನಿಮಿತ್ತ ರಾಷ್ಟ್ರಧ್ವಜದ ವಿನ್ಯಾಸ ಹಾಗೂ ಮಹತ್ವದ ಕುರಿತು ಅವರು ಮಾತನಾಡಿದರು.
ತ್ರಿವರ್ಣ ಧ್ವಜದಲ್ಲಿ ಕೇಸರಿ ಬಣ್ಣವು ತ್ಯಾಗ ಮತ್ತು ಬಲಿದಾನ, ಬಿಳಿ ಬಣ್ಣವು ಸತ್ಯ, ಶಾಂತಿ ಮತ್ತು ಶುಭ್ರತೆ, ಹಸಿರು ಬಣ್ಣವು ಸಮೃದ್ಧಿ, ಸೌಹಾರ್ದತೆ, ಅಶೋಕ ಚಕ್ರವು ನ್ಯಾಯ ಧರ್ಮದ ಸಂಕೇತವಾಗಿ ಪರಿಗಣಿಸಲ್ಪಟ್ಟಿದೆ ಎಂದು ಹೇಳಿದರು.
ಬಹುಮುಖ ಪ್ರತಿಭೆಯ ವೆಂಕಯ್ಯನವರು ಸ್ವಂತ ಪರಿಶ್ರಮದ ಮೇಲೆ ಹೆಚ್ಚಿನ ನಂಬಿಕೆ ಇಟ್ಟುಕೊಂಡಿದ್ದರು. ಸದಾ ಉತ್ಸಾಹದ ಚಿಲುಮೆಯಾಗಿದ್ದ ವೆಂಕಯ್ಯನವರ ಜೀವನವೇ ಎಲ್ಲರಿಗೂ ಆದರ್ಶವಾಗಿದೆ ಎಂದು ಹೇಳಿದರು.
ಶಿಕ್ಷಕ ಎಸ್ ಆರ್ ಚಾಳೇಕರ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ಪೈಕಿ ಬಹು ಉತ್ಸಾಹಿಯಾಗಿದ್ದ ವೆಂಕಯ್ಯನವರು, ಗಾಂಧೀ ವಿಚಾರವಾದಿಯಾಗಿದ್ದರು. ಭಾಷಾಶಾಸ್ತ್ರಜ್ಞ, ಭೂವಿಜ್ಞಾನಿ ಮತ್ತು ಬರಹಗಾರರು ಆಗಿದ್ದ ವೆಂಕಯ್ಯನವರು ರಾಷ್ಟ್ರಧ್ವಜದ ವಿನ್ಯಾಸ ಮಾಡಿ, ದೇಶಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕ ಸಿಬ್ಬಂದಿ ವರ್ಗ, ಅತಿಥಿ ಶಿಕ್ಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.