ಕನಿಷ್ಟ ವೇತನ ₹ 31 ಸಾವಿರ ಆಗ್ರಹಿಸಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ..
ಇಂಡಿ : ಕನಿಷ್ಟ ವೇತನ 31 ಸಾವಿರ ಹಾಗೂ 6 ಸಾವಿರ ರೂಪಾಯಿ ಪಿಂಚಣಿ ಮತ್ತು ವಿವಿಧ ಬೇಡಿಕೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ತಾಲ್ಲೂಕು ಘಟಕ ವತಿಯಿಂದ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಪಟ್ಟಣದ ತಾ.ಪಂ ಕಾರ್ಯಾಲಯದಲ್ಲಿ ಗ್ರಾಮ ಪಂಚಾಯತ್ ನೌಕರರ ತಾಲೂಕು ಸಮಿತಿಯ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಸೇರಿ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಗ್ರಾ.ಪಂ ನೌಕರ ಸಂಘದ ತಾಲ್ಲೂಕು ಅಧ್ಯಕ್ಷ ತುಕಾರಾಮ ಮಾರನೂರ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಖಾಸಗೀಕರಣವನ್ನು ತೀವ್ರವಾಗಿ ಜಾರಿ ಮಾಡುತ್ತಿರುವ ಹಿನ್ನೆಲೆಯ ಭಾಗವಾಗಿಯೇ ರಾಜ್ಯ ಸರ್ಕಾರವೂ ಸಹ ಅದೇ ನೀತಿಗಳನ್ನು ಜಾರಿ ಮಾಡುವ ಮುಂಚೂಣಿಯಲ್ಲಿದೆ ಗ್ರಾಮ ಪಂಚಾಯಿತಿಗಳಲ್ಲಿ ಕಸ ವಿಲೇವಾರಿಯನ್ನು ಸ್ತ್ರೀ ಶಕ್ತಿ ಸಂಘಗಳ ಮುಖಾಂತರ ಜಾರಿ ಮಾಡಿಸುತ್ತಿವೆ. ಸ್ಥಳೀಯ ಸಂಸ್ಥೆಗಳಲ್ಲಿ ಬಾಕಿ ಇರುವ ತೆರಿಗೆಗಳನ್ನು ವಸೂಲಿ ಮಾಡಲು ಸ್ತಶಕ್ತಿ ಮತ್ತು ಸ್ವ- ಸಹಾಯ ಸಂಘಗಳ ಮುಖಾಂತರ ವಸೂಲಿ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸರ್ಕಾರದ ಈ ನೀತಿಗಳಿಂದ ಗ್ರಾಮ ಪಂಚಾಯಿತಿಗಳಲ್ಲಿ ಶಾಶ್ವತವಾಗಿರುವ ಹುದ್ದೆಗಳನ್ನು ಸ್ಥಾನ ಪಲ್ಲಟ ಮಾಡಿ ಗುತ್ತಿಗೆ, ಹೊರಗುತ್ತಿಗೆ ನೀಡುವ ಖಾಸಗೀಕರಣದ ನೀತಿಗಳನ್ನು ಕೈಬಿಡಬೇಕೆಂದು ಒತ್ತಾಯಿಸುತ್ತೇವೆ. ಇನ್ನೂ ಎಪ್ರೀಲ್ 26 2004 ರ ಆದೇಶದಲ್ಲಿ ಖಾಲಿ ಹುದ್ದೆಗಳ ನೇಮಕಾತಿಯಲ್ಲಿ ಒಂದು ಹುದ್ದೆ ಮಾತ್ರ ತುಂಬಬೇಕು ಎಂಬುದು ಮಾರಕವಾಗಿರುವ ಆದೇಶವಾಗಿರುವುದರಿಂದ ಈ ಆದೇಶವನ್ನು ಕೈಬಿಡಬೇಕು. ಅದರಂತೆ ಜನವರಿ 04 – 2008ರ ಸರ್ಕಾರದ ಆದೇಶದಂತೆ ವೃಂದ ಮತ್ತು ನೇಮಕಾತಿಯನ್ನು ಮಾಡಬೇಕೆಂದು ಒತ್ತಾಯಿಸುತ್ತೇವೆ ಎಂದು ಹೇಳಿದರು.

ಈಗಿನ ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ವೇತನ ಹೆಚ್ಚಳ ಮಾಡಬೇಕು. ಗ್ರಾಮ ಪಂಚಾಯತ್ ಕಾರ್ಯನಿರ್ವಹಿಸುತ್ತಿರುವ ಕರವಸೂಲಿಗಾರರನ್ನು ಹಿಡಿದುಕೊಂಡು ಸ್ವಚ್ಚತಾಗಾರರನ್ನು ಸೇರಿ ಏಕಕಾಲಕ್ಕೆ ಸರಕಾರ ನೌಕರರನ್ನಾಗಿ ಘೋಷಿಸಬೇಕು ಎಂದು ಹೇಳಿದರು.ಇನ್ನೂ ಜುಲೈ 23 ರಂದು ರಾಜ್ಯ ಮಟ್ಟದ ಪ್ರತಿಭಟನೆ ಬೆಂಗಳೂರಿ ಫ್ರೀಡಂ ಪಾರ್ಕಿನಲ್ಲಿ ಅನಿರ್ದಿಷ್ಟ ಧರಣಿ ನಡೆಯುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾ.ಪಂ ಸಿಬ್ಬಂದಿ ಭಾಗವಹಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಲಾಲಅಹ್ಮದ ಶೇಖ, ಅರವಿಂದ ದೊಡಮನಿ, ಚಂದ್ರಕಾಂತ ಕೋಳಿ, ಬಲಭೀಮ ಜಂಬಗಿ, ಈರಪ್ಪ ಬಿಸನಾಳ, ಶ್ರೀಶೈಲ ಸರೂರ, ಶ್ರೀಕಾಂತ ಮೊರೆ, ಶಿವಶಂಕರ ಶಿಂಧೆ ಹಾಗೂ ಇನ್ನೂ ಅನೇಕರು ಉಪಸ್ಥಿತರಿದ್ದರು.
ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ ಅವರಿಗೆ ರಾಜ್ಯ ಗ್ರಾ.ಪಂ ನೌಕರರ ಸಂಘ, ತಾಲೂಕು ಘಟಕ ವತಿಯಿಂದ ಮನವಿ ಸಲ್ಲಿಸಿದರು.