ಅಫಜಲಪುರ: ಮನೆಯಲ್ಲಿರುವ ತಂದೆ, ತಾಯಿ ಎನ್ನುವ ದೇವರನ್ನು ಬಿಟ್ಟು ದೂರದ ಕಾಶಿ, ಕೈಲಾಸಗಳಿಗೆ ಹೋಗುವುದು ಸರಿಯಲ್ಲ. ಹಾಗೆ ಹೋಗುವುದು ದೇವರಿಗೂ ಕೂಡ ಇಷ್ಟವಿಲ್ಲ ಹೀಗಾಗಿ ಮನೆಯಲ್ಲೇ ಇರುವ ಹೆತ್ತವರಲ್ಲೇ ದೇವರನ್ನು ಕಾಣಿ, ನಿಮಗೆಲ್ಲ ಪುಣ್ಯ ಪ್ರಾಪ್ತಿಯಾಗಲಿದೆ ಎಂದು ಡಾ. ಅಭಿನವ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು ಹೇಳಿದರು.
ತಾಲೂಕಿನ ಬಡದಾಳ ಗ್ರಾಮದ ಭಾಗ್ಯವಂತಿ ದೇವಸ್ಥಾನದಲ್ಲಿ ನೂತನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಧರ್ಮ ಸಭೆ ಸಾನಿಧ್ಯ ವಹಿಸಿ ಮಾತನಾಡುತ್ತಾ ಭಕ್ತಿಗೆ ಇರುವಷ್ಟು ಶಕ್ತಿ ಮತ್ಯಾವುದಕ್ಕೂ ಇಲ್ಲ. ಹೀಗಾಗಿ ಶುದ್ದ ಮನಸ್ಸಿನಿಂದ ನೀವಿರುವ ಜಾಗದಿಂದಲೇ ದೇವರನ್ನು ಸ್ಮರಿಸಿ. ಬಡದಾಳದ ಭಾಗ್ಯವಂತಿ ದೇವಸ್ಥಾನ ಬಹಳ ವರ್ಷಗಳಿಂದ ಅನೇಕರ ಭಕ್ತಿಯ ತಾಣವಾಗಿದೆ. ದೇವಸ್ಥಾನದ ಅರ್ಚಕ ಭಾಗಣ್ಣ ದೇವಸ್ಥಾನಕ್ಕಾಗಿ ತನ್ನ ಬದುಕನ್ನೇ ಮುಡುಪಾಗಿಟ್ಟಿದ್ದಾನೆ. ಅದರ ಫಲವಾಗಿ ಇಂದು ಭವ್ಯ ದೇವಸ್ಥಾನ, ಮಲ್ಲಗಂಬ, ನೂತನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯಾಗಿದೆ. ಎಲ್ಲರೂ ಕೂಡಿಕೊಂಡು ದೇವಸ್ಥಾನವನ್ನು ಸರಿಯಾದ ರೀತಿಯಲ್ಲಿ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.
ಚಿಂಚೋಳಿಯ ಗದ್ದುಗೇಶ್ವರ ಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡುತ್ತಾ ತಾಲೂಕಿನಲ್ಲಿ ಅನ್ನ, ಅಕ್ಷರ, ಆಧ್ಯಾತ್ಮವೆಂಬ ತ್ರಿವಿಧ ದಾಸೋಹಗಳನ್ನು ಉಣಬಡಿಸುತ್ತಿರುವ ಡಾ. ಚನ್ನಮಲ್ಲ ಶಿವಾಚಾರ್ಯರ ಕಾರ್ಯ ಶ್ಲಾಘನೀಯವಾಗಿದೆ. ಅವರ ಅಮೃತ ಹಸ್ತದಿಂದ ಹಾಳು ಬಿದ್ದ, ಪುನಶ್ಚೇತನದ ಅವಶ್ಯಕತೆ ಇರುವ ಗುಡಿ ಗುಂಡಾರಗಳು, ದೇಗುಲಗಳು, ಮಠ ಮಾನ್ಯಗಳು ಮತ್ತೆ ತನ್ನ ಹಳೆಯ ವೈಭವಕ್ಕೆ ಮರಳುತ್ತಿವೆ. ಇಂತಹ ಪೂಜ್ಯರನ್ನು ಪಡೆದ ನಾವೆಲ್ಲ ಧನ್ಯರು ಎಂದರು.
ಈ ಸಂದರ್ಭದಲ್ಲಿ ಅರ್ಚಕ ಭಾಗಣ್ಣ ಕಂಬಾರ, ಮುಖಂಡರಾದ ಘೋಷಯ್ಯ ಸ್ವಾಮಿ, ರಾಜು ಖೈರಾಟ್, ಮಲ್ಲಣ್ಣ ಕುಂಬಾರ, ಶಿವಣ್ಣ ಮೇತ್ರಿ, ಯಲ್ಲಪ್ಪ ಪರೀಟ್, ಚನ್ನಮಲ್ಲಪ್ಪ ಮೇತ್ರಿ, ಸಿದ್ದಾರಾಮ ಮಾತಾರಿ, ಗೋರಖನಾಥ ಮಳಗಿ, ಜೀವಪ್ಪ ದೊಡ್ಮನಿ, ಶಿವಶರಣ ಡಬ್ಬಿ, ಬಸಣ್ಣ ಹಡಪದ, ಚಂದ್ರಕಾಂತ ಶಿರೂರ, ಶಿವಾನಂದ ಮೇತ್ರಿ, ಮರೇಪ್ಪ ಸಿಂಗೆ, ಹಣಮಂತ ಡಬ್ಬಿ, ಹುಸೇನಿ ಪಡ್ನೂರ, ದವಲಸಾಬ್ ಪಡ್ನೂರ, ಚನ್ನಪ್ಪ ಸಾಲೇಗಾಂವ, ಸಂಗೀತಕಾರರಾದ ಶಿವರುದ್ರಯ್ಯ ಗೌಡಗಾಂ ಹಾಗೂ ಸಂಗಡಿಗರು ಮತ್ತು ಗ್ರಾಮಸ್ಥರು ಇದ್ದರು.