VOJ ನ್ಯೂಸ್ ಡೆಸ್ಕ್ : ಐದು ರಾಜ್ಯಗಳಲ್ಲಿ 2022 ರ ವಿಧಾನಸಭಾ ಚುನಾವಣೆ ಮುಗಿದಿದ್ದು, ಇಂದು ಎಲ್ಲಾ ಐದು ರಾಜ್ಯಗಳ ಫಲಿತಾಂಶ ಪ್ರಕಟವಾಗಲಿದೆ. ಫೆಬ್ರವರಿ 10 ರಂದು ಪ್ರಾರಂಭವಾಗಿ ಮಾರ್ಚ್ 7ಕ್ಕೆ ಕೊನೆ ಹಂತದ ಮತದಾನ ಮುಗಿದಿತ್ತು. ಇದೀಗ ಎಲ್ಲ ರಾಜ್ಯದ ಮತ ಎಣಿಕೆಯತ್ತ ಎಲ್ಲರ ಚಿತ್ತ ಇದ್ದು, ಯಾರ ಕೊರಳಿಗೆ ಗೆಲುವಿನ ಮಾಲೆ ಬೀಳಲಿದೆಯೊ, ಯಾರು ಅಧಿಕಾರ ಗದ್ದುಗೆ ಹಿಡಿಯುತ್ತಾರೊ ಎಂಬ ಕುತೂಹಲ ಎಲ್ಲರಲ್ಲಿ ಮೂಡಿದೆ.
ಉತ್ತರಾಖಂಡ, ಉತ್ತರ ಪ್ರದೇಶ, ಪಂಜಾಬ್, ಮಣಿಪುರ ಮತ್ತು ಗೋವಾ ರಾಜ್ಯಗಳಲ್ಲಿ ಕೋವಿಡ್ 19 ಮಾರ್ಗಸೂಚಿಯಂತೆ ಚುನಾವಣೆ ಪ್ರಕ್ರಿಯೆ ನಡೆಸಲಾಗಿದೆ. ಉತ್ತರಾಖಂಡ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿದೆ. ಕಾಂಗ್ರೆಸ್ ಭಾರಿ ಸ್ಪರ್ಧೆ ನೀಡಿ, ಅಧಿಕಾರ ಪಡೆಯಲು ಹವಣಿಸಿದೆ. ಗುಡ್ಡಗಾಡು ರಾಜ್ಯವು ಯಾವಾಗಲೂ ಎರಡು ಪಕ್ಷಗಳ ನಡುವೆ ನಿಕಟ ಸ್ಪರ್ಧೆಗೆ ಸಾಕ್ಷಿಯಾಗಿದೆ, ಒಟ್ಟು ಮತಗಳಲ್ಲಿ ಸುಮಾರು ಮೂರನೇ ಒಂದು ಭಾಗವನ್ನು ಒಂದು ಪಕ್ಷ ಗಳಿಸಿದರೆ, ಮೂರನೇ ಒಂದು ಭಾಗವನ್ನು ಇತರರ ಪಾಲಾಗುತ್ತದೆ ಬಂದಿದೆ.
ಪಂಜಾಬ್ನಲ್ಲಿ ಎಲ್ಲಾ ಕಣ್ಣುಗಳು ಆಮ್ ಆದ್ಮಿ ಪಕ್ಷದ ಮೇಲೆ ನಿಂತಿವೆ, ಈ ಬಾರಿ ಎಎಪಿ ಕಿಂಗ್ ಮೇಕರ್ ಆಗುವ ಸಾಧ್ಯತೆ ಇದೆ ಎಂದು ರಾಜಕೀಯ ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ. ಗಡಿ ರಾಜ್ಯವಾದ ಪಂಜಾಬ್ನಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವೇ? ಕಾದು ನೋಡಬೇಕಿದೆ. ಕಾಂಗ್ರೆಸ್ ಪಕ್ಷದ ಆಂತರಿಕ ತಿಕ್ಕಾಟದಿಂದ ಲಾಭ ಪಡೆಯಲು ಬಿಜೆಪಿ ಯತ್ನಿಸುತ್ತಿದೆ.
ಗೋವಾದಲ್ಲಿ ತೃಣಮೂಲ ಕಾಂಗ್ರೆಸ್ನ ಪ್ರವೇಶ ಮತ್ತು ಆಪ್ನ ಅಬ್ಬರದ ಪ್ರಚಾರದಿಂದ ಸ್ಪರ್ಧೆ ಕುತೂಹಲ ಮೂಡಿಸಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ನೋಡುತ್ತದೆ, ಆದರೆ ಕಾಂಗ್ರೆಸ್ ಎಲ್ಲರ ಲೆಕ್ಕಾಚಾರ ತಲೆಕೆಳಗು ಮಾಡುವ ಪಣತೊಟ್ಟಿದೆ. ಎಂಟಕ್ಕೂ ಅಧಿಕ ರಾಷ್ಟ್ರೀಯ ಪಕ್ಷಗಳು ಹಲವಾರು ಸಣ್ಣಪುಟ್ಟ ಪಕ್ಷಗಳು ಕದನ ಕುತೂಹಲವನ್ನು ಉಳಿಸಿವೆ. ಅತಂತ್ರ ವಿಧಾನಸಭೆ ಬಂದರೆ ಮೈತ್ರಿ ಪ್ರಮುಖ ಪಾತ್ರವಹಿಸಲಿದೆ.
ಉತ್ತರಪ್ರದೇಶದಲ್ಲಿ ಎಂದಿನಂತೆ ನಿಕಟ ಸ್ಪರ್ಧೆಯನ್ನು ನಿರೀಕ್ಷಿಸಲಾಗಿದೆ, ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಸಮಾಜವಾದಿ ಪಕ್ಷವು ಬಿರುಸಿನ ಪ್ರಚಾರ ನಡೆಸಿದ್ದು, ಭಾರಿ ಕುತೂಹಲ ಕೆರಳಿಸಿದೆ. ಕಾಂಗ್ರೆಸ್ ತನ್ನ ಪ್ರಭುತ್ವವನ್ನು ಮತ್ತೆ ಸಾಬೀತಲು ಯತ್ನಿಸುತ್ತಿದೆ. ಬಹುಜನ ಸಮಾಜವಾದಿ ಪಕ್ಷ ಅಲ್ಲದೆ ಹಲವು ಸಣ್ಣಪುಟ್ಟ ಪಕ್ಷಗಳು ರಾಷ್ಟ್ರೀಯ ಪಕ್ಷಗಳ ನೆರಳಲ್ಲಿ ಅಧಿಕಾರ ಹಿಡಿಯಲು ಯತ್ನಿಸುತ್ತಿವೆ.
ಮಣಿಪುರದಲ್ಲಿ, ಆಡಳಿತ ಮತ್ತು ವಿರೋಧ ಪಕ್ಷಗಳಿಂದ JD(U) ಗೆ ಪಕ್ಷಾಂತರಗಳು ತುಲನಾತ್ಮಕವಾಗಿ ಕಡಿಮೆ ಪರಿಚಿತ ಪಕ್ಷವಾದರೂ ಸ್ಪರ್ಧೆ ನೀಡಲು ಮುಂದಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಮುಳುವಾಗುವ ಸಾಧ್ಯತೆಯಿದೆ.
ಒಟ್ಟಾರೆಯಾಗಿ ನೋಡಿದಾಗ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಇಂದು ಹೊರಬೀಳಲಿದ್ದು, ದೇಶದ ಐದು ರಾಜ್ಯಗಳ ಮತ ಎಣಿಕೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಮತದಾರ ಪ್ರಭು ಯಾರ ಕೊರಳಿಗೆ ಜಯಮಾಲೆ ಹಾಕಿ, ಯಾವ ಪಕ್ಷಕ್ಕೆ ಅಧಿಕಾರ ನೀಡುತ್ತಾನೋ ಕಾದು ನೋಡಬೇಕಿದೆ.