ಕತ್ತಲೆ ರಾಜ್ಯಕ್ಕೆ ಬೆಳಕು ಚೆಲ್ಲಿದ್ದು ನಮ್ಮ ಮಹದೇಶ್ವರರು:ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳು
ಮಾದಪ್ಪನ ಸನ್ನಿಧಿಯಲ್ಲಿ ಸಾಮೂಹಿಕ ವಿವಾಹ 64 ಜೋಡಿಗಳಿಗೆ ಗಣ್ಯರಿಂದ ಶುಭ ಹಾರೈಕೆ
ಹನೂರು: ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರವಾದ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನದ ರಂಗ ಮಂದಿರದ ಆವರಣದಲ್ಲಿ ಪ್ರಾಧಿಕಾರದ ವತಿಯಿಂದ 64 ನವ ಜೋಡಿಗಳು ಉಚಿತ ಸಾಮೂಹಿಕ ವಿವಾಹದಲ್ಲಿ ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಮುಖ್ಯ ಉದ್ಘಾಟಕರಾಗಿ ಆಗಮಿಸಿದ್ದ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ಹಾಗೂ ಪ್ರಾಧಿಕಾರದ ಉಪಾಧ್ಯಕ್ಷರಾದ ರಾಮಲಿಂಗರೆಡ್ಡಿ ರವರು ನವ ವಧು ವರರಿಗೆ ಮಾಂಗಲ್ಯ ದಾರಣೆ ಮಾಡುವ ಮೂಲಕ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆಯನ್ನು ನೀಡಿದರು. ನಂತರ ಮಾತನಾಡಿದ ಅವರು ದಂಪತ್ಯ ಜೀವನಕ್ಕೆ ಕಾಲಿಟ್ಟ ಎಲ್ಲರಿಗೂ ಶುಭವನ್ನು ಕೋರಿ ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಸಾಮೂಹಿಕ ವಿವಾಹ ಮಾಡಬೇಕು. ಎಸ್ಎಂ ಕೃಷ್ಣರವರು ಮೊದಲ ಬಾರಿಗೆ ಸಾಮೂಹಿಕ ವಿವಾಹವನ್ನು ಆರಂಭಿಸಿದರು. ಪ್ರಾಧಿಕಾರದ ಅಧ್ಯಕ್ಷರಾಗಿರುವ ಮುಖ್ಯಮಂತ್ರಿಗಳು ಪುಣ್ಯಕ್ಷೇತ್ರದ ಅಭಿವೃದ್ಧಿಗೆ ಒತ್ತನ್ನು ನೀಡಲಿದ್ದಾರೆ ಎಂದು ತಿಳಿಸಿದರು.
ಶ್ರೀ ಶಿವರಾತ್ರಿದೇಶಿ ಕೇಂದ್ರೀಯ ಮಹಾಸ್ವಾಮೀಜಿಗಳು ಮಾತನಾಡಿ ಮಾದಪ್ಪನ ಸನ್ನಿಧಾನದಲ್ಲಿ ಪ್ರತಿವರ್ಷದಂತೆ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡಿರುವುದು ಬಹಳ ಸಂತೋಷದ ಸಂಗತಿಯಾಗಿದೆ. ಕತ್ತಲೆ ರಾಜ್ಯಕ್ಕೆ ಬೆಳಕು ಚೆಲ್ಲಿದ್ದು ನಮ್ಮ ಮಹದೇಶ್ವರರು ಹಾಗಿದ್ದರೆ. ಈ ಪುಣ್ಯ ಕ್ಷೇತ್ರಕ್ಕೆ ಬರುವವರು ದ್ವೇಷ ಮೋಸ ಅಸೂಯೆಯನ್ನು ಬಿಟ್ಟುಬಿಡಬೇಕು. 64 ನವ ಜೋಡಿಯ ದಾಂಪತ್ಯಕ್ಕೆ ಶುಭವಾಗಲಿ ಎಂದು ತಿಳಿಸಿದರು.
ಸಾಲೂರು ಬೃಹನ್ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಗಳು ಮಾತನಾಡಿ ದಕ್ಷಿಣ ಭಾರತದಲ್ಲಿ ಜನಪ್ರಿಯವಾದ ಧಾರ್ಮಿಕ ಕ್ಷೇತ್ರ ನಮ್ಮ ಮಹದೇಶ್ವರ ನೆಲೆಸಿರುವ ಕ್ಷೇತ್ರವಾಗಿದೆ. ಮಹದೇಶ್ವರರು ಮಾನವ ತತ್ವವೋ ಅಥವಾ ದೈವ ತತ್ವವೂ ಎಂಬ ಭಾವನೆ ಇದೆ. ಮಹದೇಶ್ವರರು ಎಲ್ಲಿ ಹೋದರು ಅಲ್ಲಿ ಒಂದೊಂದು ಪವಾಡವನ್ನು ಮಾಡಿದ್ದಾರೆ. ಬೆಳಗಂಪಣ್ಣ ಸಮುದಾಯವನ್ನು ತನ್ನ ಪೂಜೆಗೆ ನೇಮಿಸಿಕೊಂಡು ಸಸ್ಯಹಾರಿಯನ್ನಾಗಿ ಮಾಡಿಕೊಂಡಿದ್ದರು ಎಂಬುದಾಗಿ ತಿಳಿಸಿದರು.
ಎಂ ಆರ್ ಮಂಜುನಾಥ್ ಅವರು ಮಾತನಾಡಿ ಪ್ರಾಧಿಕಾರವು ವಿವಾಹವನ್ನು ಅರ್ಥ ಪೂರ್ಣವಾಗಿ ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. 1989 ರಲ್ಲಿ ಸಾಮೂಹಿಕ ವಿವಾಹವು ಪ್ರಾರಂಭವಾಗಿದ್ದು ಇಲ್ಲಿವರೆಗೆ 1867 ಜೋಡಿಗಳಿಗೆ ಮಾದಪ್ಪನ ಸನ್ನಿಧಿಯಲ್ಲಿ ವಿವಾಹವಾಗಿದೆ. ಪ್ರಾಧಿಕಾರದ ವತಿಯಿಂದ ವಧುವಿಗೆ ನಾಲ್ಕು ಗ್ರಾಂ ಚಿನ್ನ ,ಕಾಲು ಉಂಗುರ, ಸೀರೆ, ರವಿಕೆ ಹಾಗೂ ವರನಿಗೆ ವಸ್ತ್ರ, ಪಂಚೆ ,ಶಲ್ಯ ಪೇಟವನ್ನು ನೀಡಲಾಗಿದೆ. ಸಾಮೂಹಿಕ ವಿವಾಹದಿಂದ ಸರಳತೆಯನ್ನು ನೋಡಬಹುದು. ಆಡಂಬರದ ಮದುವೆಗೆ ಕಡಿವಾಣವನ್ನು ಹಾಕಬೇಕಾಗಿದೆ. ಮಾದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಜನ ಆಗಮಿಸುತ್ತಾರೆ ಇಲ್ಲಿಗೆ ಸರಿಯಾದ ರಸ್ತೆ ಹಾಗೂ ಬಸ್ಗಳ ಕೊರತೆ ಇದ್ದು ಹೆಚ್ಚುವರಿ ಬಸ್ ಗಳನ್ನು ನೀಡಬೇಕು ಹಾಗೂ ಕ್ಷೇತ್ರಕ್ಕೆ ಅನುದಾನವನ್ನು ನೀಡುವ ಮೂಲಕ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಂಗಾರಪ್ಪ ಸಿ ಹಾಗೂ ಹಲವಾರು ಪತ್ರಕರ್ತರಿಗೆ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮೀಜಿಗಳು ಸನ್ಮಾನವನ್ನು ಮಾಡಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶಿಲ್ಪನಾಗ್, ಪೊಲೀಸ್ ಅಧಿಕ್ಷಕರಾದ ಕವಿತಾ ಬಿ ಟಿ, ಪ್ರಾಧಿಕಾರದ ಕಾರ್ಯದರ್ಶಿ ರಘು, ಕಾವೇರಿ ಅಚ್ಚು ಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಮರಿಸ್ವಾಮಿ, ಚಾಮರಾಜನಗರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ವೈ ಸಿ ನಾಗೇಂದ್ರ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅಧ್ಯಕ್ಷರು ಹೆಚ್ ವಿ ಚಂದ್ರು, ಗ್ರಾಮ ಪಂಚಾಯತಿ ಅಧ್ಯಕ್ಷರೇ ಶ್ರೀಮತಿ ಅರ್ಚನ ಎಸಿ ಮಹೇಶ್, ತಹಸಿಲ್ದಾರ್ ವೈ ಕೆ ಗುರುಪ್ರಸಾದ್, ಇನ್ನು ಮುಂತಾದ ಅಧಿಕಾರಿಗಳು ಹಾಜರಿದ್ದರು.