ನುಲಿಯ ಚಂದಯ್ಯನವರದ್ದು ಬಹುಮುಖ ವ್ಯಕ್ತಿತ್ವ-
ಸಂತೋಷ ಬಂಡೆ
ಇಂಡಿ: ನುಲಿಯ ಚಂದಯ್ಯನವರ ವಚನಗಳಲ್ಲಿ ಅಡಗಿದ
ಗುರು-ಲಿಂಗ-ಜಂಗಮ ಮತ್ತು ಕಾಯಕ-ದಾಸೋಹ ಎಂಬ ಚಿಂತನೆಗಳು ಇಂದಿಗೂ ಪ್ರಸ್ತುತ. ಅವರ ಬದುಕು ನಮಗೆಲ್ಲ ಆದರ್ಶವಾಗಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ಶನಿವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ನುಲಿಯ ಚಂದಯ್ಯನವರ ಜಯಂತಿ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಚಂದಯ್ಯನವರದ್ದು ಬಹುಮುಖ ವ್ಯಕ್ತಿತ್ವ. ಅವರ ನಡೆ ನುಡಿ ಕಾಯಕನಿಷ್ಠೆ, ನಿಜ ಭಕ್ತಿ ಇಂದಿಗೂ ಸಕಾಲಿಕವಾಗಿದೆ.
ಅಪ್ರಾಮಾಣಿಕತೆ, ಆಡಂಬರದ ಭಕ್ತಿ, ನಡೆ ನುಡಿಯಲ್ಲಿನ ವ್ಯತ್ಯಾಸದ ಬಗ್ಗೆ ಕಟುವಾಗಿ ಟೀಕಿಸಿದ ನುಲಿಯ ಚಂದಯ್ಯನವರ ವಚನಗಳು ಸಾರ್ವಕಾಲಿಕ ಶ್ರೇಷ್ಠತೆ ಹೊಂದಿವೆ ಎಂದು ಹೇಳಿದರು.
ಶಿಕ್ಷಕ ಎಸ್ ಆರ್ ಚಾಳೇಕರ ಮಾತನಾಡಿ, ನುಲಿಯ ಚಂದಯ್ಯನವರ ವಚನಗಳು ಸರಳ, ಅರ್ಥಗರ್ಭಿತ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಒಳಗೊಂಡಿವೆ.ಅವರ ವಚನಗಳು ಜೀವನದ ಸತ್ಯಗಳನ್ನು ಮತ್ತು ಆಧ್ಯಾತ್ಮಿಕ ಮಾರ್ಗವನ್ನು ಸರಳವಾಗಿ ವಿವರಿಸುತ್ತವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಅನಿಲ ಪತಂಗಿ ಮಾತನಾಡಿ, ನುಲಿಯ ಚಂದಯ್ಯನವರ ವಚನಗಳಲ್ಲಿ ಆಧ್ಯಾತ್ಮಿಕ ಚಿಂತನೆ, ಜೀವನದ ಸತ್ಯಗಳಿವೆ. ಅವರ 48 ವಚನಗಳಲ್ಲಿ ಸಮ ಸಮಾಜ ನಿರ್ಮಾಣದ ತಾತ್ವಿಕ ಚಿಂತನೆಗಳಿವೆ. ಕಾಯಕದಿಂದಲೇ ದೇವರನ್ನು ಕಂಡ ಈ ಮಹಾನ್ ಶರಣರ ಬದುಕೇ ಎಲ್ಲರಿಗೂ ಸ್ಫೂರ್ತಿ ಎಂದು ಹೇಳಿದರು.
ಮುಖ್ಯ ಶಿಕ್ಷಕರು ಹಾಗೂ ಎಲ್ಲ ಶಿಕ್ಷಕರು, ಮಕ್ಕಳು ಭಾಗವಹಿಸಿದ್ದರು.