ರಾಯಚೂರು: ಚಿಂತನೆ, ಕಲ್ಪನೆಗಳು ವಿಭಿನ್ನವಾಗಿ ಕಾಣಬೇಕಾದರೆ ಸಾಹಿತ್ಯದ ಸಾಂಗತ್ಯ ಅಗತ್ಯ. ನಿರಂತರವಾದ ಓದು ಬದುಕಿಗೆ ಬಲ ಕೊಡುತ್ತದೆ ಎಂದು ಕಥಾ ಲೇಖಕ ಡಾ.ಅಮರೇಶ ನುಗಡೋಣಿ ವಿಶೇಷ ಅಥಿತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಹೇಳಿದರು.
ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶದಿಂದ ಆಯೋಜಿಸಿದ್ದ ವಿದ್ಯಾರ್ಥಿ ಸಮುದಾಯ ಸಾಹಿತ್ಯಾಭಿರುಚಿಯ ಮಹತ್ವ ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ವಿದ್ಯಾರ್ಥಿಗಳಲ್ಲಿ ಇಂದು ಪತ್ರ ಬರೆಯುವ ಸಂಸ್ಕೃತಿಯೇ ಮರೆಯಾಗಿದೆ. ಪರೀಕ್ಷೆಗಳನ್ನು ಹೊರತುಪಡಿಸಿ ಬೇರೆ ಸಂದರ್ಭದಲ್ಲಿ ಬರವಣಿಗೆ ಆಗುತ್ತಿಲ್ಲ. ವಾಸ್ತವಕ್ಕಿಂತ ಬರಹ ವಿಶಿಷ್ಠವಾಗಿದೆ. ನಿಮ್ಮೂರಿನಲ್ಲಿ ಕಾಣುವ ಹಳ್ಳ, ಮರ, ಗುಡ್ಡ, ದುಡಿಯುವ ವರ್ಗ ಈ ಎಲ್ಲವೂ ಸಾಹಿತ್ಯ ಬರೆಯುವುದಕ್ಕೆ ಹಚ್ಚುತ್ತವೆ. ಇವುಗಳನ್ನು ಪ್ರೇರಣೆಯಾಗಿಸಿಕೊಂಡು, ಕನಸುಗಳ ಬೆನ್ನತ್ತಿ ಬರೆಯುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಮುಚ್ಚಿಟ್ಟುಕೊಂಡ ಮಾತುಗಳನ್ನು ಅಭಿವ್ಯಕ್ತಿಸುವುದೇ ಸಾಹಿತ್ಯ.
ಅಭಿವ್ಯಕ್ತಿಯನ್ನು ಯಾರು ಕಸಿದುಕೊಳ್ಳುವುದಿಲ್ಲ. ಈ ಲೋಕಕ್ಕೆ ಏನಾದರೂ ಹೇಳುವ ತುಡಿತ, ಮಹಾಂತ್ವಕಾಂಕ್ಷೆಯನ್ನು ನಿಮ್ಮದಾಗಿಸಿಕೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಯಂಕಣ್ಣ ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚೆಚ್ಚು ತಮ್ಮನ್ನು ಓದಿಗೆ ಒಡ್ಡಿಕೊಂಡು ಬದುಕನ್ನು ಸುಂದರವಾಗಿಸಿಕೊಳ್ಳಬೇಕು ಎಂದರು.
ಈ ವೇಳೆ ಕನ್ನಡ ವಿಭಾಗದ ಮುಖ್ಯಸ್ಥ ಡಾ. ದಸ್ತಗೀರಸಾಬ ದಿನ್ನಿ, ಆಂತರಿಕ ಗುಣಮಟ್ಟ ಭರವಸೆ ಕೋಶಗಳ ಸಂಚಾಲಕರಾದ ಮಹಾಂತೇಶ ಅಂಗಡಿ, ಇಶ್ರತ್ ಬೇಗಂ ಇದ್ದರು. ಸಹಾಯಕ ಪ್ರಾಧ್ಯಾಪಕರಾದ ಡಾ. ಶಿವಯ್ಯ ಹಿರೇಮಠ, ಮಹಾದೇವಪ್ಪ, ಡಾ. ಜೆ.ಎಲ್.ಈರಣ್ಣ, ವೆಂಕಟೇಶ ಕಲಾಲ್ ಸಾಹಿತ್ಯ ಪ್ರೇಮಿಗಳಾದ ಭೀಮನಗೌಡ ಇಟಗಿ, ಮೌನೇಶ ಗೋನಾಳ್ ಇದ್ದರು.