ಮುದ್ದೇಬಿಹಾಳ:ತಾಲೂಕಿನ ರಕ್ಕಸಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಕ್ಕಸಗಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ದುಡಿಯೋಣ ಬಾ ಅಭಿಯಾನಕ್ಕೆ ಸಹಾಯಕ ನಿರ್ದೇಶಕರು (ಗ್ರಾ.ಉ.) ಪಿ.ಎಸ್.ಕಸನಕ್ಕಿ ಅವರು ಗುರುವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಸಹಾಯಕ ನಿರ್ದೇಶಕರು, ಬೇಸಿಗೆ ಅವಧಿಯಲ್ಲಿ ನರೇಗಾ ಕೂಲಿಕಾರರಿಗೆ ನಿರಂತರ ಉದ್ಯೋಗ ಒದಗಿಸಲು ದುಡಿಯೋಣ ಬಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜನರಿಗೆ ಯೋಜನೆ ಬಗ್ಗೆ ಜಾಗೃತಿ ಮೂಡಿಸಿ ಕೆಲಸಕ್ಕಾಗಿ ಬೇಡಿಕೆ ಅರ್ಜಿಗಳನ್ನು ಪಡೆಯಲಾಗುತ್ತಿದೆ ಎಂದು ತಿಳಿಸಿದರು.
ರಕ್ಕಸಗಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನರೇಗಾ ಯೋಜನೆಯು ಸಮರ್ಪಕವಾಗಿ ಅನುಷ್ಟಾನಗೊಳ್ಳುತ್ತಿದೆ. ನರೇಗಾ ಕೂಲಿಕಾರರು ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಯಾರು ಯೋಜನೆಯಿಂದ ವಂಚಿತರಾಗದೆ ಕೆಲಸಕ್ಕೆ ಬನ್ನಿ ಎಂದು ಆಹ್ವಾನಿಸಿದರು.
ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಎಂ.ವೈ.ಅಮ್ಮನ್ನವರ ಮಾತನಾಡಿ, ಬೇಸಿಗೆ ಅವಧಿಯಲ್ಲಿ ನರೇಗಾ ಕೂಲಿಕಾರರಿಗೆ ನಿರಂತರ ಕೆಲಸ ಒದಗಿಸಲಾಗುವುದು. ಕೆಲಸದ ಬೇಡಿಕೆ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರಿಗೂ ಸಮುದಾಯ ಆಧಾರಿತ ಕಾಮಗಾರಿಯಲ್ಲಿ NMR ತೆಗೆಯಲಾಗುವುದು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸಕ್ಕೆ ಬನ್ನಿ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹೊಸದಾಗಿ ಉದ್ಯೋಗಚೀಟಿ ಪಡೆದ ಕೂಲಿಕಾರರಿಗೆ ಉದ್ಯೋಗಚೀಟಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ ನರೇಗಾ ಐಇಸಿ ಸಂಯೋಜಕ ಪರಮೇಶ ಹೊಸಮನಿ, ಗ್ರಾಮ ಪಂಚಾಯತಿ ಕಾರ್ಯದರ್ಶಿ ಸಿ.ಬಿ.ಹೊಳಿ, ಗ್ರಾ.ಪಂ.ಉಪಾಧ್ಯಕ್ಷೆ ತಂಗಮ್ಮ ಅ.ಗುರಿಕಾರ, ಮಾಜಿ ಅಧ್ಯಕ್ಷೆ ಪದ್ಮಾವತಿ ಸಂ. ವಡ್ಡರ, ಸದಸ್ಯರಾದ ನಾಗಮ್ಮ ಹುಡೇದ, ಯಲ್ಲಮ್ಮ ಕಾನಕ್ಕಿ ಹಾಗೂ ಗ್ರಾ.ಪಂ.ಸಿಬ್ಬಂದಿ, ಬಿಎಫ್ ಟಿ, ಎಂಬಿಕೆ ಇದ್ದರು.