ಮುದ್ದೇಬಿಹಾಳ:ಇಲ್ಲಿನ ಎಪಿಎಂಸಿ ಉಪ ಮಾರುಕಟ್ಟೆಯನ್ನು ಮುಖ್ಯ ಮಾರುಕಟ್ಟೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಅಗತ್ಯ ಕ್ರಮ ಕೈಕೊಳ್ಳುವಂತೆ ಆಗ್ರಹಿಸಿ ಮುದ್ದೇಬಿಹಾಳ ಎಪಿಎಂಸಿ ವರ್ತಕರ ಸಂಘದ ಪದಾಧಿಕಾರಿಗಳು ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ನಡೆದ ಎಪಿಎಂಸಿ ಸಮಸ್ಯೆಗಳ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಕೃಷಿ ಮಾರಾಟ ಇಲಾಖೆ ನಿರ್ದೇಶಕರೂ ಆಗಿರುವ ಕೃಷಿ ಮಾರಾಟ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಶಿವಾನಂದ ಕಾಪಸಿ ಅವರಿಗೆ ಮನವಿ ಸಲ್ಲಿಸಿದರು. ಮುದ್ದೇಬಿಹಾಳ ಎಪಿಎಂಸಿ ಪ್ರತಿನಿಧಿಗಳಾಗಿ ಭಾಗವಹಿಸಿದ್ದ ಸಂಘದ ಪದಾಧಿಕಾರಿಗಳಾದ ಬಿ.ಎಸ್.ಮೇಟಿ, ಮಲ್ಲನಗೌಡ ಬಿರಾದಾರ ಮತ್ತು ಮುದ್ದೇಬಿಹಾಳ ಪ್ರತಿನಿಧಿಸುವ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ನಿರ್ದೇಶಕ ಅಶೋಕ ರೇವಡಿ ಇನ್ನಿತರರು ಈ ಮನವಿ ಸಲ್ಲಿಸಿದರು.
ಮುದ್ದೇಬಿಹಾಳ ತಾಲೂಕು ವ್ಯಾಪ್ತಿಯಲ್ಲಿದ್ದ ತಾಳಿಕೋಟೆಯಲ್ಲಿ ಎಪಿಎಂಸಿ ಮುಖ್ಯ ಮಾರುಕಟ್ಟೆ ಸ್ಥಾಪಿಸಲಾಗಿತ್ತು. ಕ್ಷೇತ್ರ ವಿಭಜನೆಯ ನಂತರ ತಾಳಿಕೋಟೆ ತಾಲೂಕು ಕೇಂದ್ರವಾಗಿ ಬದಲಾಗಿದೆ. ಹಾಗಾಗಿ ತಾಳಿಕೋಟೆ ಕೃಷಿ ಉತ್ಪನ್ನ ಮಾರುಕಟ್ಟೆಯ ಕ್ಷೇತ್ರ ವಿಭಜಿಸಿ ಮುದ್ದೇಬಿಹಾಳ ಸ್ವತಂತ್ರ ಕೃಷಿ ಉತ್ಪನ್ನ ಮಾರುಕಟ್ಟೆ ಸ್ಥಾಪಿಸಬೇಕು ಎಂದು ಮನವಿಯಲ್ಲಿ ಬೇಡಿಕೆ ಇಡಲಾಗಿದೆ. ಮುದ್ದೇಬಿಹಾಳ ಮತಕ್ಷೇತ್ರದ ಶಾಸಕರಾದ ಸಿ.ಎಸ್.ನಾಡಗೌಡ ಅವರು ೨೦೨೪ರ ಸಪ್ಟೆಂಬರ್ ೨೯ರಂದು, ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ೨೦೨೪ರ ಸಪ್ಟೆಂಬರ್ ೩೦ರಂದು ಪತ್ರಗಳನ್ನು ಬರೆದು ನಮ್ಮ ಬೇಡಿಕೆ ಈಡೇರಿಕೆಗೆ ಮಂಜೂರಾತಿ ನೀಡುವಂತೆ ಕೋರಿದ್ದಾರೆ. ಇದಲ್ಲದೆ ತಾಳಿಕೋಟೆ ಕೇಂದ್ರ ಸಮಿತಿಯಲ್ಲಿ ಎಪಿಎಂಸಿ ಅಧ್ಯಕ್ಷರು, ಸದಸ್ಯರು ೨೦೦೮ರ ಆಗಸ್ಟ್ ೭ ರಂದೇ ಮಾರುಕಟ್ಟೆ ವಿಭಜಿಸಿ ಮುದ್ದೇಬಿಹಾಳದಲ್ಲಿ ಮುಖ್ಯ ಮಾರುಕಟ್ಟೆ ಮಾಡಲು ಸರ್ವಸಮ್ಮತ ಠರಾವು ಸ್ವೀಕರಿಸಿದ್ದಾರೆ. ಮುದ್ದೇಬಿಹಾಳ ಉಪ ಮಾರುಕಟ್ಟೆಯು ಸೆಸ್ (ಮಾರ್ಕೆಟ್ ಫೀ) ಸಂಗ್ರಹದಲ್ಲಿ ಮುಂಚೂಣಿಯಲ್ಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಮನವಿ ಸಲ್ಲಿಸುವಾಗ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಎಸ್.ಪಿ.ಸಂಶಿಮಠ, ಉಪಾಧ್ಯಕ್ಷರಾದ ಸಂದೀಪ ಬಿಡಸಾರಿಯಾ, ಪ್ರವೀಣ ಅಂಗಡಿ, ವೀರೇಶ ಮೋಟಗಿ, ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ, ಸಹ ಗೌರವ ಕಾರ್ಯದರ್ಶಿ ಮಹೇಂದ್ರ ಸಿಂಘಿ, ಎಪಿಎಂಸಿ ಸಮಿತಿ ಚೇರಮನ್ ಬಸವರಾಜ ಯಕಲಾಸಪುರ ಇನ್ನಿತರರು ಇದ್ದರು. ಆದಷ್ಟು ಬೇಗ ಬೇಡಿಕೆ ಈಡೇರಿಸಲು ಕ್ರಮ ಜರುಗಿಸುವಂತೆ ಕೋರಿದ್ದಕ್ಕೆ ಸ್ಪಂಧಿಸಿದ ಕಾಪಸಿ ಅವರು ಬೆಂಗಳೂರಿಗೆ ಹೋದ ಕೂಡಲೇ ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು ಎಂದು ಅಶೋಕ ರೇವಡಿ ಪತ್ರಿಕೆಗೆ ತಿಳಿಸಿದರು.