ಮುದ್ದೇಬಿಹಾಳ: ಹಳೇ ಸಿಪಿಐ ಕ್ವಾರ್ಟರ್ಸ್‌ನಲ್ಲಿ ನಗರ ಪೊಲೀಸ್ ಠಾಣೆ ಆರಂಭಕ್ಕೆ: ಶಾಸಕ ಸಿ.ಎಸ್. ನಾಡಗೌಡ
ಮುದ್ದೇಬಿಹಾಳ: ಪಟ್ಟಣದ ಜನರ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ ಬಸ್ ನಿಲ್ದಾಣದ ಪಕ್ಕದಲ್ಲಿರುವ ಹಳೇ ಸಿಪಿಐ ಕ್ವಾರ್ಟರ್ಸ್ ಆವರಣದಲ್ಲಿ ನೂತನ ನಗರ ಪೊಲೀಸ್ ಠಾಣೆಯನ್ನು ಆರಂಭಿಸಲು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಸ್ ಡಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್. ನಾಡಗೌಡ ಹೇಳಿದರು.
ಶನಿವಾರ ಪೊಲೀಸ್ ಅಧಿಕಾರಿಗಳು ಹಾಗೂ ಪಟ್ಟಣದ ಪ್ರಮುಖ ಗಣ್ಯರೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಗ್ರಾಮೀಣ ಮತ್ತು ನಗರ ಠಾಣೆಗಳ ವಿಭಜನೆ
ಸರ್ಕಾರವು ಬಜೆಟ್‌ನಲ್ಲಿ ಘೋಷಿಸಿರುವಂತೆ ಮುದ್ದೇಬಿಹಾಳದಲ್ಲಿ ಗ್ರಾಮೀಣ ಪೊಲೀಸ್ ಠಾಣೆಯನ್ನು ಪ್ರತ್ಯೇಕವಾಗಿ ಆರಂಭಿಸಲಾಗುವುದು. ಪ್ರಸ್ತುತ ಇರುವ ಠಾಣೆಯನ್ನು ಗ್ರಾಮೀಣ ವಿಭಾಗಕ್ಕೆ ಬಿಟ್ಟುಕೊಟ್ಟು, ಪಟ್ಟಣದ ಹೃದಯ ಭಾಗದಲ್ಲಿರುವ ಹಳೇ ಸಿಪಿಐ ಕ್ವಾರ್ಟರ್ಸ್ ಜಾಗದಲ್ಲಿ ನಗರ ಪೊಲೀಸ್ ಠಾಣೆಯನ್ನು ಸ್ಥಾಪಿಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಗಿದೆ. ಇಲಾಖೆಯ ಆಡಳಿತಾತ್ಮಕ ವಿಷಯಗಳಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ, ಆದರೆ ಸಾರ್ವಜನಿಕರ ಅನುಕೂಲಕ್ಕಾಗಿ ಈ ಜಾಗವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸೂಚಿಸಿದ್ದೇನೆ ಎಂದು ಶಾಸಕರು ಸ್ಪಷ್ಟಪಡಿಸಿದರು.
ಬಸ್ ನಿಲ್ದಾಣದ ಬಳಿ ಠಾಣೆ: ಜನರಿಗೆ ಅನುಕೂಲ
ಈ ವೇಳೆ ಮಾತನಾಡಿದ ಪಿಎಸ್‌ಐ ಸಂಜಯ ತಿಪರೆಡ್ಡಿ, “ಇಳಕಲ್ ಮತ್ತು ಇಂಡಿ ಭಾಗಗಳಲ್ಲಿ ಬಸ್ ನಿಲ್ದಾಣದ ಸಮೀಪವೇ ಠಾಣೆಗಳಿವೆ. ಅದೇ ಮಾದರಿಯಲ್ಲಿ ಮುದ್ದೇಬಿಹಾಳದಲ್ಲೂ ಬಸ್ ನಿಲ್ದಾಣದ ಪಕ್ಕದಲ್ಲಿ ಠಾಣೆ ಆರಂಭವಾದರೆ ಜನರಿಗೆ ತಲುಪಲು ಸುಲಭವಾಗುತ್ತದೆ. ಈ ಬಗ್ಗೆ ಮೇಲಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ” ಎಂದು ಹೇಳಿದರು.
ಈ ವೇಳೆ ಕರ್ನಾಟಕ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕ ಸತೀಶ ಓಸ್ವಾಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಮುಖಂಡರಾದ ಎಂ.ಬಿ. ನಾವದಗಿ, ರಮೇಶ ಓಸ್ವಾಲ್, ಪುರಸಭೆ ನಿಕಟಪೂರ್ವ ಅಧ್ಯಕ್ಷ ಮೆಹೆಬೂಬ ಗೊಳಸಂಗಿ, ಡಾ. ವಿಜಯಕುಮಾರ ಗೂಳಿ,ಸದು ಮಠ, ಪಂಚ ಗ್ಯಾರಂಟಿ ಉಪಾಧ್ಯಕ್ಷ ಲಕ್ಷ್ಮಣ ಲಮಾಣಿ, ಲ್ಯಾಂಡ್ ಆರ್ಮಿಇಂಜಿನಿಯರ್ ನಾಗರಾಜ ಬಿರಾದಾರ, ಪೋಲಿಸ್ ಸಿಬ್ಬಂದಿಗಳು ಸೇರಿದಂತೆ ಭಾಗವಹಿಸಿದ್ದರು.