ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಪಟ್ಟಣದ ಖಾಸ್ಗತೇಶ್ವರ ಮಠ ಮತ್ತು ದ್ಯಾಮವ್ವನ ಕಟ್ಟೆಯ ನಡುವೆ ಪುರಸಭೆ ವತಿಯಿಂದ ನಿರ್ಮಿಸಲಾಗುತ್ತಿರುವ ಮೆಗಾ ಮಾರ್ಕೆಟ್ ಕಟ್ಟಡದ ಕಾಮಗಾರಿಗಾಗಿ ಅಗೆದು ವಿರೂಪಗೊಳಿಸಿ ಬಂದ್ ಮಾಡಿರುವ ಎರಡು ರಸ್ತೆಗಳನ್ನು ಕೂಡಲೇ ಸಂಚಾರಕ್ಕೆ ಮುಕ್ತಗೊಳಿಸಿ ವ್ಯಾಪಾರಕ್ಕೆ ಸಾರ್ವಜನಿಕರು ಬಂದು ಹೋಗಲು ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿ ೧೬ ವ್ಯಾಪಾರಸ್ಥರು ಗುರುವಾರ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಖಾಸ್ಗತೇಶ್ವರ ಮಠದ ಮುಂಭಾಗ, ಬಲಭಾಗ ವ್ಯಾಪಾರಸ್ಥರ ಅಂಗಡಿಗಳು ಇವೆ. ಮಾರ್ಕೆಟ್ ಕಟ್ಟಡಕ್ಕಾಗಿ ಬೇಸ್‌ಮೆಂಟ್ ಕಾಮಗಾರಿ ನಡೆಯುತ್ತಿದೆ. ಎರಡು ಪ್ರಮುಖ ರಸ್ತೆಗಳನ್ನು ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರು ಅಗೆದು ಜನ ಸಂಚರಿಸದಂತೆ ಬಂದ್ ಮಾಡಿದ್ದಾರೆ. ಇದರಿಂದ ಸಾರ್ವಜನಿಕರು ಅಲ್ಲಿ ಬರದೆ ವ್ಯಾಪಾರ ವಹಿವಾಟು ಕುಂಠಿತಗೊಂಡಿದೆ. ಹೀಗಾಗಿ ನಿತ್ಯದ ವ್ಯಾಪಾರವನ್ನೇ ನಂಬಿ ಬದುಕು ನಡೆಸುತ್ತಿರುವ ಇಲ್ಲಿನ ವ್ಯಾಪಾರಸ್ಥರಿಗೆ ಸಾಕಷ್ಟು ತೊಂದರೆ ಆಗಿದೆ. ಕಳೆದ ೪ ತಿಂಗಳಿಂದ ಇದೇ ಪರಿಸ್ಥಿತಿ ಇರುವುದು ಸಮಸ್ಯೆ ಗಂಭೀರಗೊಳ್ಳಲು ಕಾರಣವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕಾಮಗಾರಿ ಪರಿಶೀಲನೆಗೆ ಬಂದ ಸಂದರ್ಭ ಪುರಸಭೆ ಆಡಳಿತಕ್ಕೆ ಅಲ್ಲಿನ ವ್ಯಾಪಾರಸ್ಥರು ಈಗಾಗಲೇ ಎರಡು ಬಾರಿ ಮೌಖಿಕವಾಗಿ ರಸ್ತೆಯನ್ನು ತೆರವುಗೊಳಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದರೂ ಪ್ರಯೋಜನವಾಗಿಲ್ಲ. ಇದಲ್ಲದೆ ಬೇಸಮೆಂಟ್‌ಗಾಗಿ ಆಳವಾಗಿ ಗುಂಡಿ ತೆಗೆದಿರುವುದರಿಂದ ರಸ್ತೆ ಪಕ್ಕದಲ್ಲೇ ಕೊರಕಲು ಬಿದ್ದಿದ್ದು ಅಕಸ್ಮಾತ್ ಯಾರಾದರೂ ಸಾರ್ವಜನಿಕರು ಕಾಲು ಜಾರಿ ಬಿದ್ದರೆ ಪ್ರಾಣಾಪಾಯ ಆಗುವ ಸಂಭವ ಹೆಚ್ಚಾಗಿದೆ. ಜನಸಂಚಾರಕ್ಕೆ ರಸ್ತೆ ಮುಕ್ತಗೊಳಿಸಿ ತೆಗ್ಗು ಇರುವ ಪ್ರದೇಶದಲ್ಲಿ ಬೇಲಿ ನಿರ್ಮಿಸಿ ಜನರಿಗೆ ತೊಂದರೆ ಅಗದಂತೆ ನೋಡಿಕೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದೇ ಕಟ್ಟಡದ ಪಕ್ಕದಲ್ಲಿ ಎರಡು ಮನೆಗಳಿವೆ. ಈ ಮನೆಗಳಲ್ಲಿ ವಾಸವಾಗಿರುವ ಕುಟುಂಬದ ಸದಸ್ಯರಿಗೂ ರಸ್ತೆ ಬಂದ್ ಆಗಿದ್ದರಿಂದ ತಿರುಗಾಡಲು ಸಾಕಷ್ಟು ಸಮಸ್ಯೆ ಆಗಿದೆ. ಮೇಲಾಗಿ ಈ ಮನೆಗಳ ಮುಂಭಾಗವೇ ಆಳವಾದ ತೆಗ್ಗು ತೆಗೆದಿರುವುದು ಅಪಾಯಕ್ಕೆ ಪುರಸಭೆಯೇ ಆಹ್ವಾನ ನೀಡಿದಂಥ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ತಿಳಿಸಲಾಗಿದೆ.
ಅಭಿವೃದ್ದಿ ಕೆಲಗಳಿಗೆ ಯಾರದೇ ತಕರಾರು ಇಲ್ಲ. ಆದರೆ ಸಾರ್ವಜನಿಕರಿಗೆ, ವ್ಯಾಪಾರಸ್ಥರಿಗೆ ತೊಂದರೆ ಕೊಟ್ಟು ಕಟ್ಟಡ ಕಟ್ಟುತ್ತಿರುವುದು ಸರಿಯಾದ ಕ್ರಮವಲ್ಲ. ಸಾರ್ವಜನಿಕರಿಗೆ, ವ್ಯಾಪಾರಸ್ಥರಿಗೆ ತೊಂದರೆ ಆಗದ ರೀತಿಯಲ್ಲಿ ಕಟ್ಟಡ ಕಾಮಗಾರಿ ಮುಂದುವರೆಸಬೇಕು. ಬೇಡಿಕೆಯಂತೆ ಕೂಡಲೇ ಎರಡು ರಸ್ತೆಗಳನ್ನು ಜನಸಂಚಾರಕ್ಕೆ ಮುಕ್ತಗೊಳಿಸಲು, ಇಲ್ಲಿನ ವ್ಯಾಪಾರ ವಹಿವಾಟು ಎಂದಿನಂತ ನಡೆಯಲು ಅವಕಾಶ ಮಾಡಿಕೊಡದೇ ಹೋದಲ್ಲಿ ಪುರಸಭೆ ಎದುರು ನೊಂದ ವ್ಯಾಪಾರಸ್ಥರು, ಅಲ್ಲಿರುವ ಎರಡು ಮನೆಗಳ ಕುಟುಂಬದವರು, ಸಾರ್ವಜನಿಕರು ಪುರಸಭೆ ಕಚೇರಿ ಎದುರು ದಿಢಿರ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಎಂ.ಕೆ.ಬೇವಿನಗಿಡ, ಎಲ್.ಎಸ್.ದೇಶಪಾಂಡೆ, ಸಿ.ಸಿ.ಗೋಟೂರ, ಎ.ಜಿ.ಮಗಜಿ, ಎ.ಜಿ.ಮಾಡಗಿ, ಎಂ.ವಿ.ತಾರನಾಳ, ಕೆ.ಎಲ್.ಶಿರೋಳ, ಹಾಜಿ ಮಕಾನದಾರ, ಜೈರಾಬಿ ಮಕಾನದಾರ, ಮಾಬುಬ್ಬಿ ಬಾಗವಾನ ಸೇರಿ ೧೬ ವ್ಯಾಪಾರಸ್ಥರು ಮನವಿ ಪತ್ರಕ್ಕೆ ಸಹಿ ಮಾಡಿದ್ದಾರೆ.