ಮುದ್ದೇಬಿಹಾಳ: ಶಾಸಕ ಬಸನಗೌಡ ಯತ್ನಾಳ ಉಚ್ಛಾಟನೆ ವಿರೋಧಿಸಿ ನಡೆದ ಹೋರಾಟದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರೈತ ಮೋರ್ಚಾ ರಾಜ್ಯಾಧ್ಯಕ್ಷ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಭಾವಚಿತ್ರಗಳಿಗೆ ಅವಮಾನಿಸಿದ ಸ್ಥಳ ಬಸವೇಶ್ವರ ವೃತ್ತದಲ್ಲಿಯೇ ಬಿಜೆಪಿ, ನಡಹಳ್ಳಿ ಅಭಿಮಾನಿ ಬಳಗದ ಮುಖಂಡರು, ಕಾರ್ಯಕರ್ತರು ಗುರುವಾರ ಆ ಮೂವರ ಭಾವಚಿತ್ರಗಳಿಗೆ ಪಂಚಾಮೃತದ ಕ್ಷೀರಾಭಿಷೇಕ ನಡೆಸಿ ಶುದ್ಧೀಕರಣಗೊಳಿಸಿದರು.
ನಂದಿನಿ ಪ್ಯಾಕೆಟ್ ಹಾಲಿನಲ್ಲಿ ಗೋಮೂತ್ರ, ಆಕಳ ಹಾಲು, ಮೊಸರು, ತುಪ್ಪ, ಸಕ್ಕರೆ, ಬಾಳೆಹಣ್ಣು ಮಿಶ್ರಗೊಳಿಸಿ ಹಿಂದು ಸಂಪ್ರದಾಯದ ಪ್ರಕಾರ ಫ್ಲೆಕ್ಸ್ ಮೇಲೆ ಜಗ್‌ನಿಂದ ಸುರಿದು ಅಭಿಮಾನ ಹೊರಹಾಕಿದರು. ಈ ವೇಳೆ ನೂರಾರು ಸಂಖ್ಯೆಯಲ್ಲಿದ್ದ ಮುಖಂಡರು, ಅಭಿಮಾನಿಗಳು ಯಡಿಯೂರಪ್ಪ, ವಿಜಯೇಂದ್ರ, ನಡಹಳ್ಳಿಯವರಿಗೆ ಜೈಕಾರ ಹಾಕಿ ೨೦೨೮ರಲ್ಲಿ ಬಿಜೆಪಿ ಸರ್ಕಾರವೇ ಆಡಳಿತ ನಡೆಸಲಿದ್ದು ವಿಜಯೇಂದ್ರರವರು ಮುಖ್ಯಮಂತ್ರಿಯಾಗಿ, ನಡಹಳ್ಳಿಯವರು ಕೃಷಿ ಸಚಿವರಾಗಿ ಅಧಿಕಾರ ಸ್ವೀಕರಿಸುವುದು ನಿಶ್ಚಿತ ಎನ್ನುವ ಘೋಷಣೆ ಮೊಳಗಿಸಿದರು.
ಇದಕ್ಕೂ ಮುನ್ನ ನಡೆದ ಬಹಿರಂಗ ಸಭೆಯಲ್ಲಿ ಪಂಚಮಸಾಲಿ ಸಮಾಜದ ಮುಖಂಡ, ಬಿಜೆಪಿ ಧುರೀಣ ಮುತ್ತುಸಾಹುಕಾರ ಅಂಗಡಿ ಅವರು ಮಾತನಾಡಿ, ಯತ್ನಾಳ ಪರ ಹೋರಾಟದ ನೆಪದಲ್ಲಿ ನಮ್ಮ ನಾಯಕರಿಗೆ ಅವಮಾನ ಮಾಡಲಾಗಿದೆ. ನಾವು ಅವರಷ್ಟು ಕೀಳುಮಟ್ಟಕ್ಕಿಳಿಯೊಲ್ಲ. ಬೆಳಗಾವಿಯಲ್ಲಿ ಪಂಚಮಸಾಲಿಗಳ ಮೇಲೆ ಕಾಂಗ್ರೆಸ್ ಸರ್ಕಾರ ಲಾಠಿ ಚಾರ್ಜ್ ಮಾಡಿಸಿದಾಗ ಕಾಂಗ್ರೆಸ್‌ನಲ್ಲಿರುವ ಪಂಚಮಸಾಲಿಗರು ಎಲ್ಲಿದ್ರಿ. ನಡಹಳ್ಳಿಯವರು ಜನರನ್ನು ಸಂಘಟಿಸಿ ಇದೇ ಬಸವೇಶ್ವರ ವೃತ್ತದಲ್ಲಿ ಪ್ರತಿಭಟಿಸಿ ಸಮಾಜದ ಸ್ವಾಮೀಜಿ, ಸಮಾಜದ ಪರ ನಿಂತರು. ಯತ್ನಾಳರನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದೀರಿ. ಒಳ್ಳೇ ರೀತಿ ಹೋರಾಟ ಮಾಡಲು ಜನ ಸೇರಿಸಿ. ಯತ್ನಾಳರ ಬಗ್ಗೆ ಕಳಕಳಿ ಹುಟ್ಟುವಂತೆ ಮಾಡಿ ಎಂದು ಕಿಡಿಕಾರಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಗೌರಮ್ಮ ಹುನಗುಂದ ಮಾತನಾಡಿ, ಹೋರಾಟಕ್ಕೆ ಎಲ್ಲರಿಗೂ ಹಕ್ಕಿದೆ. ಆದರೆ ಹೋರಾಟದ ನೆಪದಲ್ಲಿ ನಡಹಳ್ಳಿ ಸೇರಿದಂತೆ ನಮ್ಮ ನಾಯಕರಿಗೆ ಕೆಟ್ಟ ಪದಗಳನ್ನು ಬಳಸಿರುವುದನ್ನು ಖಂಡಿಸುತ್ತೇವೆ. ಪಕ್ಷ ತಾಯಿ ಇದ್ದಂತೆ. ಆ ತಾಯಿಯನ್ನೇ ಮರೆಯುತ್ತಿದ್ದೀರಿ. ಬೆಳೆದ ಮೇಲೆ ತಾಯಿಯಂಥ ಪಕ್ಷ, ಪಕ್ಷದ ನಾಯಕರ ಬಿರುದ್ಧ ಮಾತನಾಡುವುದು ಸರಿಯಲ್ಲ. ನಡಹಳ್ಳಿ ಸಾಹೇಬರು ಸೇರಿದಂತೆ ಪಕ್ಷದ ನಾಯಕರಿಗೆ ಕೆಟ್ಟ ಪದ ಬಳಸಿದರೆ ಮಾತಾಡಿದರೆ ನಾವ್ಯಾರೂ ಸಹಿಸುವುದಿಲ್ಲ ಎಚ್ಚರದಿಂದಿರಿ ಎಂದು ಹರಿಹಾಯ್ದರು.
ಪಂಚಮಸಾಲಿ ಸಮಾಜದ ಯುವ ಮುಖಂಡ, ಮೂಲ ಬಿಜೆಪಿ ಕಾರ್ಯಕರ್ತ ಸಿದ್ದರಾಜ ಹೊಳಿ ಅವರು ಮಾತನಾಡಿ, ನಮ್ಮ ನಾಯಕರ ಬಗ್ಗೆ ಕೆಟ್ಟದಾಗಿ ಮಾತಾಡಿದರೆ ನಿಮ್ಮ ನಾಲಿಗೆಗೆ ಹುಳ ಬೀಳುತ್ತೆ. ಬಿಜೆಪಿ ಕಾರ್ಯಕರ್ತರು ಯಡಿಯೂರಪ್ಪ ಅವರನ್ನು ಒಪ್ಪಿಕೊಂಡಿದ್ದೇವೆ. ಅವರ ವಿರುದ್ದ ಮಾತಾಡುವವರು ಅವರ ಕೂದಲ ಎಳೆಗೂ ಸಮನಾಗುವುದಿಲ್ಲ. ಜಾತ್ಯಾತೀತರು, ಎಲ್ಲ ಸಮಾಜದವನ್ನೂ ಜೊತೆಗೆ ಕರೆದೊಯ್ಯುತ್ತಿರುವ ನಮ್ಮ ನಾಯಕರ ವಿರುದ್ಧ ಅವಹೇಳನಕ್ಕೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಉತ್ತರ ಕೊಡುತ್ತಾರೆ ಎಂದರು.
ಪಂಚಮಸಾಲಿ ಸಮಾಜದ ಹಿರಿಯ ಮುಖಂಡ, ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್.ಪಾಟೀಲ ನಾಲತವಾಡ, ಮಲಕೇಂದ್ರಗೌಡ ಪಾಟೀಲ, ಪ್ರಭು ಕಡಿ, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಸಂಗಮ್ಮ ದೇವರಳ್ಳಿ, ಗುರುನಾಥಗೌಡ ಬಿರಾದಾರ ಬಸರಕೋಡ ಅವರು ಮಾತನಾಡಿ ಪಕ್ಷದ ನಾಯಕರಿಗೆ ಬೆಂಬಲ ಸೂಚಿಸಿ ಭಾವಚಿತ್ರಗಳಿಗಾದ ಅವಮಾನಕರ ಘಟನೆಯನ್ನು ಖಂಡಿಸಿದರು.
ಪಕ್ಷದ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ್, ಕಾರ್ಯದರ್ಶಿ ಸಂಜು ಬಾಗೇವಾಡಿ, ಮುಖಂಡರಾದ ಸೋಮನಗೌಡ ಬಿರಾದಾರ, ಸೋಮನಗೌಡ ಪಾಟೀಲ ನಡಹಳ್ಳಿ, ತಾಪಂ ಮಾಜಿ ಸದಸ್ಯರಾದ ಮಲ್ಲಿಕಾರ್ಜುನ ತಂಗಡಗಿ, ಪ್ರೇಮಸಿಂಗ್ ರಾಠೋಡ, ಪುರಸಭೆ ಸದಸ್ಯೆ ಸಹನಾ ಬಡಿಗೇರ, ಎಂ.ಆರ್.ಪಾಟೀಲ ವಕೀಲರು, ಸೋಮನಗೌಡ ಮೇಟಿ ಗುಡಿಹಾಳ, ಶಂಕರಗೌಡ ಶಿವಣಗಿ, ಲಕ್ಷ್ಮಣ ಬಿಜ್ಜೂರ, ಬಸವರಾಜ ಗುಳಬಾಳ, ಶ್ರೀಶೈಲ ದೊಡಮನಿ, ಶ್ರೀಶೈಲ ಸೂಳಿಭಾವಿ, ರಮೇಶ ಢವಳಗಿ, ಸಂಗನಗೌಡ ಪಾಟೀಲ, ಶೇಖರ ಢವಳಗಿ, ನಿಖಿಲ್ ಸರೂರ, ಎಂ.ಬಿ.ಬಿರಾದಾರ ವಕೀಲರು, ಸಂಗಮೇಶ ಕರಭಂಟನಾಳ, ಪ್ರೇಮಸಿಂಗ್ ಚವ್ಹಾಣ, ಬಸವರಾಜ ಸರೂರ, ಚನಬಸ್ಸು ಚನ್ನಿಗಾವಿಶೆಟ್ರು, ಸಂಗಮೇಶ ಹತ್ತಿ, ರೇಖಾ ಕೊಂಡಗೂಳಿ, ಪ್ರೀತಿ ಕಂಬಾರ, ಕಾವೇರಿ ಕಂಬಾರ, ಅಶೋಕ ಚಿನಿವಾರ, ಹಣಮಂತ ನಲವಡೆ, ಸಂಗಮೇಶ ಗುಂಡಕನಾಳ ನಾಗೂರ, ಮುದಕಪ್ಪ ಗಂಗನಗೌಡರ, ರಾಜು ಪಾಟೀಲ ಬಳಬಟ್ಟಿ, ರಾಜಶೇಖರ ಹೊಳಿ, ರವಿ ಹವಾಲ್ದಾರ, ಸಿದ್ದು ಹಿರೇಮಠ, ಸಂಗಮೇಶ ಬಿಸಲದಿನ್ನಿ ಸುಭಾಷ್ ಕಾಳಗಿ, ಸೇರಿ ಹಲವಾರು ಕಾರ್ಯಕರ್ತರು ಅಭಿಮಾನಿಗಳು ಭಾಗವಹಿಸಿದ್ದರು.
ಪಕ್ಷಕ್ಕೆ ಯಾರೂ ಅನಿವಾರ್ಯರಲ್ಲ. ಉಚ್ಛಾಟನೆಗೊಂಡವರು ಆತ್ಮಾವಲೋಕನ ಮಾಡಿಕೊಂಡು ಸ್ವಭಾವ ತಿದ್ದಿಕೊಳ್ಳಬೇಕು. ಪಕ್ಷ ಒಡೆಯುವ ಕೆಲಸ ಬಿಟ್ಟು ಈಗಲಾದರೂ ಸುಧಾರಿಸಿಕೊಳ್ಳಬೇಕು. ವೈಯುಕ್ತಿಕ ವಿಚಾರವನ್ನು ಪಕ್ಷಕ್ಕೆ ಅಂಟಿಸಬಾರದು. ವೈಯುಕ್ತಿಕ ವಿಷಯಗಳಿಗಾಗಿ ಹೋರಾಟದ ದಾರಿ ತಪ್ಪಿಸಬಾರದು.
–ಪ್ರಭು ಕಡಿ, ಬಿಜೆಪಿ ಹಿರಿಯ ಮುಖಂಡರು, ಮುದ್ದೇಬಿಹಾಳ.