ಮುದ್ದೇಬಿಹಾಳ:ಕರ್ನಾಟಕ ನ್ಯಾಯಾಂಗ ವ್ಯವಸ್ಥೆಗೆ ದೇಶದಲ್ಲಿಯೇ ಒಳ್ಳೇಯ ಹೆಸರಿದೆ. ಬಾಕಿ ಪ್ರಕರಣಗಳ ಸಂಖ್ಯೆ ಹೆಚ್ಚಾದಲ್ಲಿ ನ್ಯಾಯದಾನ ವ್ಯವಸ್ಥೆ ಬಗ್ಗೆ ಬೆನ್ನು ಚಪ್ಪರಿಸಿಕೊಳ್ಳುವುದು ಹೇಗೆ ಸಾಧ್ಯ. ಹೀಗಾಗಿ ಬಾಕಿ ಪ್ರಕರಣಗಳ ತ್ವರಿತ ವಿಲೇವಾರಿಯಲ್ಲಿ ನ್ಯಾಯಾಧೀಶರ ಜೊತೆಗೆ ವಕೀಲರ ಪಾತ್ರವೂ ಮಹತ್ವದ್ದಾಗಿರುತ್ತದೆ ಎನ್ನುವುದನ್ನರಿತುಕೊಳ್ಳಬೇಕು ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಇಲ್ಲಿನ ಕೋರ್ಟ ಕಾಂಪ್ಲೆಕ್ಸ್ನಲ್ಲಿ ಭಾನುವಾರ ಏರ್ಪಡಿಸಿದ್ದ 5ನೇ ಹೆಚ್ಚುವರಿ ಜಿಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ, ಲಾ ಛೇಂರ‍್ಸ್, ಸಹಾಯಕ ಸರ್ಕಾರಿ ಅಭಿಯೋಜಕರ ಕಚೇರಿ ಕಟ್ಟಡಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಜಯಪುರ ಜಿಲ್ಲೆಯಲ್ಲಿ 4 ಲಕ್ಷ 5 ಸಾವಿರ ಕುಟುಂಬಗಳಿವೆ. 66000 ಕೇಸ್ ಬಾಕಿ ಇವೆ. ಇದು ಪ್ರತಿ 6ನೇ ಕುಟುಂಬಕ್ಕೆ ಒಂದು ಕೇಸ್‌ನಂತಾಗುತ್ತದೆ. ಜನರಿಗೆ ಕಾನೂನು ಪ್ರಜ್ಞೆ ಸರಿಯಾಗಿರುವುದಿಲ್ಲ. ವಕೀಲರು ವಕೀಲರು ಕ್ರಿಯಾಶೀಲರಾಗಿ ಕಾನೂನು ತಿಳಿಸಿಕೊಡಬೇಕು. ಕಕ್ಷಿದಾರರನ್ನು ಗೌರವದಿಂದ ಕಾಣಬೇಕು. ಮಾಜಿ ಸೈನಿಕರು, ಮಾಧ್ಯಮದವರು ಕಾನೂನು ತಿಳಿದುಕೊಂಡು ಮುನ್ನಡೆಯಬೇಕು. ಮುದ್ದೇಬಿಹಾಳದಲ್ಲಿ ಜಿಲ್ಲಾ ಕೋರ್ಟ ಸ್ಥಾಪನೆಯಾಗುವಲ್ಲಿ ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿಯವರ ಶ್ರಮ, ಪ್ರಯತ್ನ ಬಹಳಷ್ಟಿದೆ. ಮೈಕ್ರೋಫೈನಾನ್ಸ್ ಹಾವಳಿ ನಿಯಂತ್ರಿಸಲು ಸರ್ಕಾರ ಸುಗ್ರಿವಾಜ್ಞೆ ಮೂಲಕ ಜಾರಿಗೊಳಿಸಿರುವ ಕಾನೂನು ಸಮರ್ಪಕ ಬಳಕೆಯಾಗಬೇಕು ಎಂದರು.
ಉದ್ಘಾಟನೆಯ ನೆರವೇರಿಸಿದ ಹೈಕೋರ್ಟ ನ್ಯಾಯಮೂರ್ತಿಗಳು, ವಿಜಯಪುರ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಎಂ.ಐ.ಅರುಣ್ ಅವರು ಮಾತನಾಡಿ, ಸ್ವಾತಂತ್ರö್ಯ ಹೋರಾಟದ ಕಾಲದಲ್ಲಿ ವಕೀಲರು ಸಮಾಜದಲ್ಲಿ ನಾಯಕರಾಗಿರುತ್ತಿದ್ದರು. ಇವತ್ತು ನಾಯಕರಾಗುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇವರು ಜನನಾಯಕರಾಗಿ ಹೊರಹೊಮ್ಮಬೇಕಾದರೆ ಜನಗಳಿಗೆ ಸ್ಪಂಧಿಸಬೇಕು. ಕಕ್ಷಿದಾರರಿಗೆ ಪ್ರಾಮಾಣಿಕ ಮಾರ್ಗದರ್ಶನ, ಮಹತ್ವ ಕೊಡಬೇಕು. ಸಮಾಜ ಬದಲಾದಂತೆ ಕಾನೂನು ಅವಶ್ಯಕತೆ ಹೆಚ್ಚಾಗುತ್ತಿರುವುದನ್ನು ಅರಿತುಕೊಳ್ಳಬೇಕು. ಬದಲಾದ ಕಾಲಘಟ್ಟದಲ್ಲಿ ತಂತ್ರಜ್ಞಾನ ಬಳಸಿಕೊಂಡು ಅಧ್ಯಯನಶೀಲರಾಗಿ ವೃತ್ತಿ ಪಾಂಡಿತ್ಯ ಹೆಚ್ಚಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಹೈಕೋರ್ಟನ ನ್ಯಾಯಮೂರ್ತಿ ಎಚ್.ಪಿ.ಸಂದೇಶ ಅವರು ಮಾತನಾಡಿ, ರೈತನ ಮಗನಾಗಿರುವ ನನಗೆ ರೈತರ ಸಂಕಷ್ಟದ ಅರಿವಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇಡುವ ಕಕ್ಷಿದಾರನಿಗೆ ನ್ಯಾಯ ಒದಗಿಸಿದಾಗಲೇ ಕೋರ್ಟ್ ಸ್ಥಾಪನೆ ಸಾರ್ಥಕಗೊಳ್ಳುತ್ತದೆ. ನ್ಯಾಯ ಕೋರಿ ಬರುವ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತಾಗಲು ವಕೀಲರು ಆತ್ಮಾವಲೋಕನ ಮಾಡಿಕೊಂಡು ನ್ಯಾಯಾಂಗದ ವಿಶ್ವಾಸ ಉಳಿಸಬೇಕು. ಸನ್ಯಾಸಿ ತರ ಜೀವಿಸಿ ಕುದುರೆ ತರ ಕೆಲಸ ಮಾಡಬೇಕು ಅನ್ನೋ ಮಾತು ಎಲ್ಲರಿಗೂ ಅನ್ವಯಿಸುತ್ತದೆ. ಹಿರಿಯ ವಕೀಲರು ಕಿರಿಯ ವಕೀಲರಲ್ಲಿ ಆತ್ಮವಿಶ್ವಾಸ ತುಂಬಬೇಕು. ಹಂಚಿಕೊಂಡು ಬಾಳುವುದನ್ನು ಕಲಿಯಬೇಕು. ವಕೀಲೆಯರು ಸಮಾಜದ ಧ್ವನಿಯಾಗಬೇಕು ಎಂದರು.
ಅತಿಥಿಯಾಗಿದ್ದ ಶಾಸಕ ಸಿ.ಎಸ್.ನಾಡಗೌಡ, ಮುದ್ದೇಬಿಹಾಳ ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ ಮಾತನಾಡಿದರು. ಸ್ಥಳೀಯ ಜೆಎಂಎಫ್‌ಸಿ ಕೋರ್ಟನ ಹಿರಿಯ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿ, ಜೆಎಂಎಫ್‌ಸಿ ನ್ಯಾಯಾಧೀಶರಾದ ಸಂಪತ್ತಕುಮಾರ ಬಳೂಲಗಿಡದ ಸೇರಿದಂತೆ ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಎಲ್ಲ ಜಿಲ್ಲಾ, ತಾಲೂಕು ನ್ಯಾಯಾಧೀಶರು, ವಕೀಲರುಗಳ ಸಂಘದ ಪದಾಧಿಕಾರಿಗಳು, ಸದಸ್ಯರು ಸೇರಿ ಹಲವರು ಉಪಸ್ಥಿತರಿದ್ದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶಿವಾಜಿ ನಲವಡೆ ಸ್ವಾಗತಿಸಿದರು. ಹಿರಿಯ ವಕೀಲರಾದ ಎನ್.ಆರ್.ಮೊಕಾಶಿ ನಿರೂಪಿಸಿದರು. ಎಂ.ಎ.ಲಿಂಗಸೂರ ವಂದಿಸಿದರು. ಕಾರ್ಯಕ್ರಮದ ನಂತರ ಸಚಿವ ಪಾಟೀಲರು ಶಾಸಕ ನಾಡಗೌಡರೊಂದಿಗೆ ಎಪಿಎಂಸಿಯಲ್ಲಿ ನಿರ್ಮಾಣ ಹಂತದಲ್ಲಿರುವ ದಿ ರಡ್ಡಿ ಸಹಕಾರಿ ಬ್ಯಾಂಕ್‌ಗೆ ಭೇಟಿ ನೀಡಿ ಪರಿಶೀಲಿಸಿದರು.
ಹೈಕೋರ್ಟನ 150 ಬೇಡಿಕೆಗಳಲ್ಲಿ 115 ಹೊಸ ಕೋರ್ಟ ಪ್ರಾರಂಭಿಸಿ ಸರ್ಕಾರ ಈಡೇರಿಸಿದೆ. 2200 ಹುದ್ದೆ ತುಂಬಿಕೊಳ್ಳಲಾಗುತ್ತಿದೆ. ಉಚಿತ ಭಾಗ್ಯಗಳಿಗೆ ಹಣ ಕೊಟ್ಟು ಸರ್ಕಾರದ ಬೊಕ್ಕಸ ಖಾಲಿ ಆಗಿದೆ ಎನ್ನುವ ಟೀಕಾಕಾರರು ಬೊಕ್ಕಸ ಖಾಲಿಯಾಗಿಲ್ಲ ಎನ್ನುವುದನ್ನು ತಿಳಿದುಕೊಳ್ಳಬೇಕು.
–ಎಚ್.ಕೆ.ಪಾಟೀಲ, ಕಾನೂನು ಸಚಿವರು.
ಜನತೆ ನ್ಯಾಯಾಂಗದ ಮೇಲೆ ವಿಶ್ವಾಸ ಕಳೆದುಕೊಂಡರೆ ನ್ಯಾಯದಾನ ವ್ಯವಸ್ಥೆಯೇ ನಿರುಪಯುಕ್ತವಾಗುತ್ತದೆ. ಫ್ರೀಬೀಸ್‌ಗಳಿಂದ ಜನ ಸೋಮಾರಿಗಳಾಗುತ್ತಿದ್ದಾರೆಂದು ಸುಪ್ರೀಂ ಕೋರ್ಟ ಹೇಳಿರುವುದು ವಾಸ್ತವ. ಜನರಿಗೆ ದುಡಿಯಲು ಹಚ್ಚಬೇಕು. ಬಸವಣ್ಣನವರ ಕಾಯಕವೇ ಕೈಲಾಸ ಎಲ್ಲ ಕಾಲದಲ್ಲೂ ಪ್ರಸ್ತುತವಾದದ್ದಾಗಿದೆ.
–ಎಚ್.ಪಿ.ಸಂದೇಶ್, ನ್ಯಾಯಮೂರ್ತಿಗಳು, ಕರ್ನಾಟಕ ಹೈಕೋರ್ಟ್.