ಪಾಳ್ಯ ಗ್ರಾಮದ ಪಂಚಾಯಿತಿಯ ನೂತನ ಕಟ್ಟಡ ಲೋಕಾರ್ಪಣೆ ಮಾಡಿದ ಶಾಸಕ ಎಂಆರ್ ಮಂಜುನಾಥ್
ಹನೂರು: ಗ್ರಾಮಗಳ ಅಭಿವೃದ್ಧಿಯ ಶಕ್ತಿ ಕೇಂದ್ರ ಗ್ರಾಮ ಪಂಚಾಯಿತಿ ಕಾರ್ಯಾಲಯಗಳಾಗಿದ್ದು, ಇಂತಹ ಶಕ್ತಿ ಕೇಂದ್ರದ ನೂತನ ಕಟ್ಟಡ ಲೋಕಾರ್ಪಣೆಗೊಳ್ಳುತ್ತಿದ್ದು, ಸಾರ್ವಜನಿಕರಿಗೆ ಸಮರ್ಪಕ ಸೇವೆ ದೊರೆಯುವಂತೆ ಆಗಲಿ ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.
ಹನೂರು ಕ್ಷೇತ್ರ ವ್ಯಾಪ್ತಿಯ ಪಾಳ್ಯ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಗ್ರಾ.ಪಂ.ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮಗಳ ಅಭಿವೃದ್ಧಿಗೆ ಜನರ ಸಹಭಾಗಿತ್ವ ಅತ್ಯಂತ ಮುಖ್ಯ. ಪಾಳ್ಯ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ನನ್ನದೇ ಆದ ಕ್ರಿಯಾ ಯೋಜನೆಗಳಿದೆ. ಗ್ರಾಮದಲ್ಲಿ ಅಶುಚಿತ್ವ ತಾಂಡವಾಡುತ್ತಿದೆ. ಶುಚಿತ್ವಕ್ಕೆ ಮನ್ನಣೆ ನೀಡಲು ಗ್ರಾ.ಪಂ.ಆಡಳಿತ ಮಂಡಳಿ ಕಾರ್ಯ ಪ್ರವೃತ್ತರಾಗಬೇಕು.
ಪಾಳ್ಯ ಗ್ರಾಮದಲ್ಲಿ ಪ್ರತಿಭಾನ್ವಿತ ಕ್ರೀಡಾಪಟುಗಳು ಇದ್ದಾರೆ ಹೋಬಳಿ ಮಟ್ಟದಲ್ಲೂ ಕೂಡ ಕ್ರೀಡಾಂಗಣವನ್ನು ಮಾಡುವ ಚಿಂತನೆ ಇದೆ. ಈ ಕುರಿತು ಕ್ರೀಡಾ ಸಚಿವರ ಜೊತೆ ಚರ್ಚಿಸಿದ್ದೇನೆ. ಪಾಳ್ಯ ಮುಖ್ಯ ರಸ್ತೆ ಹಾಗೂ ಪಾಳ್ಯ ಉಗನೀಯ ರಸ್ತೆ ಅಭಿವೃದ್ಧಿಗೆ ಈಗಾಗಲೇ ಅನುದಾನಕ್ಕೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿರುವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ಚೈತ್ರ ಹಾಗೂ ಸದಸ್ಯರು ಎ.ಡಿ ಗೋಪಾಲಕೃಷ್ಣ, ಪಿಡಿಒ ಜುನೈದ್ ಅಹಮದ್, ವಿವಿಧ ಗ್ರಾಮದ ಜೆಡಿಎಸ್ ಮುಖಂಡರುಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.
ವರದಿ: ಚೇತನ್ ಕುಮಾರ್ ಎಲ್, ಹನೂರು ತಾಲ್ಲೂಕು, ಚಾಮರಾಜನಗರ ಜಿಲ್ಲೆ.