ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ-ಉಮಾದೇವಿ ಸೊನ್ನದ
ಇಂಡಿ: ಮಕ್ಕಳಿಗೆ ಕಲಿಕಾಂಶಗಳ ಮೂಲಕ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಅನುಕೂಲ ಕಲ್ಪಿಸಿ ಕಲಿಕೆಯ ಫಲಿತಾಂಶವನ್ನು ಸುಧಾರಿಸುವದು ಇಂದಿನ ದಿನಗಳಲ್ಲಿ ಬಹುಮುಖ್ಯವಾಗಿದೆ ಎಂದು ವಿಜಯಪುರ ಡಯಟ್‌ನ ಉಪನಿರ್ದೇಶಕಿ ಉಮಾದೇವಿ ಸೊನ್ನದ ಶಿಕ್ಷಕರಿಗೆ ಕರೆ ನೀಡಿದರು.
ಅವರು ಇಂದು ಪಟ್ಟಣದ ಗುರುಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ, ಎಸ್ ಎಸ್ ಕೆ, ಡಯಟ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಇಂಡಿ ಹಾಗೂ ಚಡಚಣ ಶೈಕ್ಷಣಿಕ ವಲಯಗಳ ಬಿಇಓ, ಬಿ ಆರ್ ಸಿ ಹಾಗೂ ಸಿ ಆರ್ ಪಿ, ಬಿ ಆರ್ ಪಿ ರವರಿಗೆ ಹಮ್ಮಿಕೊಂಡಿರುವ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಜಾಗತಿಕ ಶಿಕ್ಷಣದ ಮೂಲಕ ಸುಸ್ಥಿರ ಅಭಿವೃದ್ಧಿ, ಸುಸ್ಥಿರ ಜೀವನಶೈಲಿ, ಮಾನವ ಹಕ್ಕುಗಳ ರಕ್ಷಣೆ ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ಮಕ್ಕಳಿಗೆ ಒದಗಿಸುವದು ಶಿಕ್ಷಕರ ಬಹುಮುಖ್ಯ ಕಾರ್ಯವಾಗಿದೆ ಎಂದರು.
ಡಯಟ್‌ನ ಉಪನ್ಯಾಸಕ ಅಬ್ದುಲ್‌ರಹಿಮ ಮುಜಾವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ ಎಸ್ ಆಲಗೂರ ಮಾತನಾಡಿ, ಶಿಕ್ಷಕರು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಗುಣಾತ್ಮಕ ಶಿಕ್ಷಣ ನೀಡಲು ಮುಂದಾಗಬೇಕು ಎಂದರು.
ಚಡಚಣ ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತಾ ಹುನ್ನೂರ ಅವರು ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ಮಾತನಾಡಿದರು. ಡಯಟ್ ಉಪನ್ಯಾಸಕ ನಾಗೇಂದ್ರ ಸಿನ್ನೂರ, ಸುಮಂಗಲಾ ಮಲ್ಹಾರಿ ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ತರಬೇತಿ ನೀಡಿದರು.
ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಎಸ್ ಆರ್ ನಡುಗಡ್ಡಿ, ಬಿ ಎಸ್ ನಾಡಿಗೇರ ಹಾಗೂ ಇಂಡಿ ಚಡಚಣ ವಲಯದ ೫೦ ಕ್ಕೂ ಹೆಚ್ಚು ಸಿ ಆರ್ ಪಿ ಹಾಗೂ ಬಿ ಆರ್ ಪಿ ಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎ ಜಿ ಚೌಧರಿ ಸ್ವಾಗತಿಸಿದರು. ಬಿ ಆಯ್ ಗೊರನಾಳ ನಿರೂಪಿಸಿದರು.