ಮಹಾನಗರ ಪಾಲಿಕೆ ನೌಕರರ ಧರಣಿ ಸ್ಥಳಕ್ಕೆ ಶಾಸಕ ಯತ್ನಾಳ ಭೇಟಿ
ಬೇಡಿಕೆ ಈಡೇರಿಸಲು ಗಟ್ಟಿಯಾಗಿ ನಿಲ್ಲುವ ಭರವಸೆ
ವಿಜಯಪುರ: ಮಹಾನಗರ ಪಾಲಿಕೆ ನೌಕರರು ಸೇರಿದಂತೆ ಸ್ಥಳೀಯ ಸಂಸ್ಥೆಗಳ ನೌಕರರ ನ್ಯಾಯಯುತ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸಲು ತಮ್ಮೊಂದಿಗೆ ಗಟ್ಟಿಯಾಗಿ ನಿಲ್ಲುವುದಾಗಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು ಅಭಯ ನೀಡಿದರು.
ವಿಜಯಪುರ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ವಿಜಯಪುರ ಮಹಾನಗರ ಪಾಲಿಕೆ ನೌಕರರ ಸಂಘದ ವತಿಯಿಂದ ಕಳೆದ 5 ದಿನಗಳಿಂದ ನಡೆಯುತ್ತಿರುವ ಧರಣೆ ಸ್ಥಳಕ್ಕೆ ಶನಿವಾರ ಭೇಟಿ ನೀಡಿ, ಬೆಂಬಲ ವ್ಯಕ್ತಪಡಿಸಿ ಅವರ ಮಾತನಾಡಿದರು.
ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ನೌಕರರು ಕೆಲಸ ಸ್ತಗೀತಗೊಳಿಸಿ ನಿರಂತರವಾಗಿ 5 ದಿನಗಳಿಂದ ಹೋರಾಟ ನಡೆಸುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಆಗುತ್ತಿದ್ದರೂ ಮುಖ್ಯಮಂತ್ರಿಗಳಾಗಿ, ಉಪಮುಖ್ಯಮಂತ್ರಿ ಆಗಲಿ, ಸಂಬಂಧಿಸಿದ ಸಚಿವರಾಗಲಿ ಈ ಬಗ್ಗೆ ಕಿಂಚಿತ್ತೂ ಗಮನಹರಿಸಿಲ್ಲ. ಇದರಿಂದ ರಾಜ್ಯದಲ್ಲಿ ಸರ್ಕಾರ ಜೀವಂತವಾಗಿದೆಯೋ ಇಲ್ವೋ ತಿಳಿಯದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದುಡಿದವರಿಗೆ ವೇತನ ನೀಡಲು ಆಗದ ಈ ಸರ್ಕಾರ, ಅಧಿಕಾರದ ಹಪಾಹಪಿಗಾಗಿ ದುಡಿಯದವರಿಗೆ ಗ್ಯಾರಂಟಿ ನೀಡುತ್ತಿರುವುದು ವಿಪರ್ಯಾಸ. ನೌಕರರ ವೇತನವನ್ನು ಸರ್ಕಾರವೇ ನೀಡಬೇಕು, ಅದನ್ನು ಬಿಟ್ಟು ಅಭಿವೃದ್ಧಿಗಾಗಿ ಇರುವ ಸಾಮಾನ್ಯ ನಿಧಿಯಲ್ಲಿ ವೇತನ ಪಾವತಿಸುವುದು ಯಾವ ನ್ಯಾಯ? ಕಷ್ಟಪಟ್ಟು ಶ್ರಮಹಿಸುವ ನೌಕರರಿಗೆ ಸರ್ಕಾರ ಸರಿಯಾಗಿ ಸಂಬಳ ನೀಡಬೇಕು, ಜೊತೆಗೆ ಅಗತ್ಯ ಸೌಲಭ್ಯ ಕಲ್ಪಿಸುವುದು ಸರ್ಕಾರ ಕರ್ತವ್ಯ. ಹೀಗಾಗಿ ಸ್ಥಳೀಯ ಸಂಸ್ಥೆಗಳ ನೌಕರರ ನ್ಯಾಯಯುತ ಬೇಡಿಕೆಗಳಾದ ಪೂರ್ಣ ಪ್ರಮಾಣದಲ್ಲಿ ಸರ್ಕಾರವೇ ವೇತನ ನೀಡಬೇಕು. ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಸೌಲಭ್ಯ ಯತಾವತ್ಥಾಗಿ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಕ್ಷಣ ಮಧ್ಯಸ್ಥಿಕೆ ವಹಿಸಿ ಜನಪ್ರತಿನಿಧಿಗಳ ಸಭೆ ಕರೆದು, ನೌಕರರ ಸಮಸ್ಯೆಗಳನ್ನು ಬಗೆಹರಿಸಬೇಕು. ಇಲ್ಲದಿದ್ದರೆ ತಮ್ಮೊಂದಿಗೆ ನಾನು ಕೂಡ ಹೋರಾಟಕ್ಕೆ ನಿಲ್ಲುವೆ. ಅಲ್ಲದೆ, ಮುಂಬರುವ ವಿಧಾನಸಭೆ ಅಧಿವೇಶನದಲ್ಲಿಯೂ ಗಟ್ಟಿಯಾಗಿ ಧ್ವನಿ ಎತ್ತಿ, ಸರ್ಕಾರದ ಮೇಲೆ ಒತ್ತಡ ತಂದು ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದರು.
ಈ ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲೂ ಯಡಿಯೂರಪ್ಪನವರು ವಿಜಯಪುರ ಮಹಾನಗರ ಪಾಲಿಕೆಗೆ ಮಂಜೂರಾಗಿದ್ದ ರೂ.125 ಕೋಟಿ ಅನುದಾನ ಹಿಂಪಡಿದಿದ್ದರೂ ಆಗ ಅಧಿವೇಶನದಲ್ಲಿ ಗಟ್ಟಿಯಾಗಿ ನಿಂತು ಧ್ವನಿ ಎತ್ತಿದರ ಪ್ರತಿಫಲವಾಗಿ ರಾಜ್ಯದ 10 ಮಹಾನಗರ ಪಾಲಿಕೆಗೆ ಹಣ ಬಿಡುಗೊಳಿಸಿದರು. ಗಟ್ಟಿಯಾಗಿ ನಿಂತಿದ್ದರಿಂದಲೇ ವಿಜಯಪುರ ನಗರ ಅಭಿವೃದ್ಧಿ ಆಗಲು ಸಾಧ್ಯವಾಯಿತು. ನೌಕರರ ನ್ಯಾಯಯುತ ಹೋರಾಟಕ್ಕೂ ಅದೇ ದಿಟ್ಟತನದಿಂದ ಧ್ವನಿ ಎತ್ತಿ ನ್ಯಾಯ ಕೊಡಿಸಲಾಗುವುದು ಎಂದು ಹೇಳಿದರು.
ಮಹಾನಗರ ಪಾಲಿಕೆ ಸದಸ್ಯರಾದ ಎಂ.ಎಸ್.ಕರಡಿ, ಪ್ರೇಮಾನಂದ ಬಿರಾದಾರ, ರಾಹುಲ್ ಜಾಧವ, ರಾಜಶೇಖರ ಕುರಿಯವರ, ಜವಾಹರ ಗೋಸಾವಿ, ಗಿರೀಶ ಪಾಟೀಲ, ಮುಖಂಡರಾದ ಪಾಂಡುಸಾಹುಕಾರ ದೊಡಮನಿ, ವಿಕ್ರಮ ಗಾಯಕವಾಡ, ರಾಜು ಜಾಧವ, ರಾಜಶೇಖರ ಬಜಂತ್ರಿ, ಸಂತೋಷ ತಳಕೇರಿ ಸೇರಿದಂತೆ ವಿಜಯಪುರ ಮಹಾನಗರ ಪಾಲಿಕೆ ನೌಕರರ ಸಂಘದ ಪದಾಧಿಕಾರಿಗಳು, ನೌಕರರು, ಪೌರಕಾರ್ಮಿಕರು ಉಪಸ್ಥಿತರಿದ್ದರು.