ನೇಕಾರರಿಗೆ ಕಚ್ಚಾ ನೂಲು ಪೂರೈಕೆಗೆ ಸಚಿವ ಶಿವಾನಂದ ತಾಕೀತು
ಬಸವಕಲ್ಯಾಣ ನೇಕಾರ ನಿಯೋಗದ ಮನವಿಗೆ ಸಚಿವರ ಸ್ಪಂದನೆ
ವಿಜಯಪುರ : ಬೀದರ ಜಿಲ್ಲೆಯ ಬಸವಕಲ್ಯಾಣದ ನೇಕಾರರಿಗೆ ನಿರಂತರವಾಗಿ ಕಚ್ಚಾ ನೂಲು ಪೂರೈಸುವಂತೆ ಜವಳಿ ಸಚಿವರಾದ ಶಿವಾನಂದ ಪಾಟೀಲ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಭಾನುವಾರ ವಿಜಯಪುರ ನಗರಕ್ಕೆ ಆಗಮಿಸಿ ಸಚಿವರಾದ ಶಿವಾನಂದ ಪಾಟೀಲ ಅವರನ್ನು ಗೃಹ ಕಛೇರಿಯಲ್ಲಿ ಭೇಟಿ ಮಾಡಿದ ಬೀದರ ಜಿಲ್ಲೆಯ ಬಸವಕಲ್ಯಾಣ ನಗರಸಭೆ ಅಧ್ಯಕ್ಷರಾದ ಎಂ.ಡಿ.ಸಗಿರೊದ್ದೀನ್ ನೇತೃತ್ವದ ನಿಯೋಗ ಸಲ್ಲಿಸಿದ ಮನವಿ ಸ್ವೀಕರಿಸಿ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು.
ಕಳೆದ ಎರಡು ತಿಂಗಳಿಂದ ಬಸವಕಲ್ಯಾಣ ನೇಕಾರರಿಗೆ ಕಚ್ಚಾ ನೂಲು ಪೂರೈಕೆ ಆಗಿಲ್ಲ. ನೇಕಾರರಿಗೆ ನೇಯ್ಗೆ ಶೆಡ್ ನಿರ್ಮಿಸಬೇಕು ಹಾಗೂ ನೇಕಾರ ಸಮುದಾಯ ಭವನ ನಿರ್ಮಿಸಬೇಕೆಂದು ನೇಕಾರರ ನಿಯೋಗ ಸಚಿವರಿಗೆ ಮನವಿ ಸಲ್ಲಿಸಿತು.
ಮನವಿ ಆಲಿಸಿ, ಸ್ಥಳದಿಂದಲೇ ಜವಳಿ ಇಲಾಖೆಯ ಆಯುಕ್ತೆ ಜ್ಯೋತಿ ಅವರಿಗೆ ದೂರವಾಣಿ ಮೂಲಕ ನಿರ್ದೇಶನ ನೀಡಿದ ಸಚಿವರು, ನೇಕಾರರಿಗೆ ಸಮಸ್ಯೆ ಮಾಡದೇ ನಿರಂತರವಾಗಿ ಹಾಗೂ ಆದ್ಯತೆ ಮೇರೆಗೆ ಕಚ್ಚಾ ನೂಲು ಪೂರೈಸುವಂತೆ ಸೂಚಿಸಿದರು.
ಇದಲ್ಲದೇ ಬೀದರ ಜಿಲ್ಲೆಯ ಕಛೇರಿಗೆ ಯಾದಗಿರಿ ಜಿಲ್ಲೆಯ ಅಧಿಕಾರಿಗೆ ಪ್ರಭಾರ ನೀಡಿದ್ದು, ದೂರದ ಬೀದರ ಜಿಲ್ಲೆಗೆ ಹೋಗಿ ಆಡಳಿತ ನಡೆಸಲು ಸಮಸ್ಯೆ ಆಗಲಿದೆ. ಹೀಗಾಗಿ ನೇಕಾರರ ಹಿತದೃಷ್ಟಿಯಿಂದ ಕಲಬುರಗಿ ಜಿಲ್ಲೆಯ ಅಧಿಕಾರಿಗೆ ಪ್ರಭಾರ ವಹಿಸುವಂತೆ ಸೂಚಿಸಿದರು.
ಇದಲ್ಲದೇ ನೇಕಾರರ ನಿಯೋಗ ಸಲ್ಲಿಸಿರುವ ಇತರೆ ಬೇಡಿಗಳನ್ನು ಸಕಾರಾತ್ಮಕ ರೀತಿಯಿಂದ ಪರಿಗಣಿಸುವ ಭರವಸೆ ನೀಡಿದರು.
ಬಸವಕಲ್ಯಾಣ ನೇಕಾರರ ನಿಯೋಗಸಲ್ಲಿ ನಗರಸಭೆ ಸದಸ್ಯ ಮೂಸಾಮಿಯ್ಯಾ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಕುತುಬುದ್ದೀನ್, ಸಾಮಾಜಿಕ ಕಾರ್ಯಕರ್ತ ಕರೀಂಸಾಬ್ ಸೇರಿದಂತೆ ಇತರರು ನಿಯೋಗದಲ್ಲಿದ್ದರು.
ದೂರದ ಬೀದರ ಜಿಲ್ಲೆಯ ಬಸವಕಲ್ಯಾಣದಿಂದ ಬಂದಿರುವ ನೇಕಾರರ ಸಮಸ್ಯೆಗಳನ್ನು ಜವಳಿ ಸಚಿವರಾದ ಶಿವಾನಂದ ಪಾಟೀಲ ಅವರು ಶಾಂತಚಿತ್ತದಿಂದ ಆಲಿಸಿದ್ದಾರೆ ನೇಕಾರರ ಸಮಸ್ಯೆಗಳ ವಿಷಯದಲ್ಲಿ ಸಹಾನುಭೂತಿ ಹೊಂದಿರುವ ಸಚಿವರು, ನೇಕಾರರ ನಿಯೋಗದ ಸಮಸ್ಯೆಗಳನ್ನು ಶಾಂತಚಿತ್ತದಿಂದ ಆಲಿಸಿ, ಸ್ಥಳದಲ್ಲೇ ಪರಿಹಾರ ಕಂಡುಕೊಡುವಲ್ಲಿ ತೋರಿದ ಇಚ್ಛಾಶಕ್ತಿ ನಮಗೆ ಸಂತಸ, ಸಂತೃಪ್ತಿ ತಂದಿದೆ.
ವಿಜಯಪುರ : ಬಸವಕಲ್ಯಾಣ ನಗರಸಭೆ ಅಧ್ಯಕ್ಷರಾದ ಎಂ.ಡಿ.ಸಗಿರೊದ್ದೀನ್ ನೇತೃತ್ವದ ನೇಕಾರರ ನಿಯೋಗ ಜವಳಿ ಸಚಿವ ಶಿವಾನಂದ ಪಾಟೀಲ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.