ಸೈನಿಕ ಶಾಲೆ ಬಿಜಾಪುರ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು.
ವಿಜಯಪುರ : ಕಾರ್ಗಿಲ್ ವಿಜಯ ದಿವಸದ 26 ನೇ ವಾರ್ಷಿಕೋತ್ಸವವನ್ನು ಸೈನಿಕ ಶಾಲೆ ಬಿಜಾಪುರದ ಆವರಣದಲ್ಲಿ ಶನಿವಾರ, 26 ಜುಲೈ 2025 ರಂದು ಆಚರಿಸಲಾಯಿತು.
ಇಂದು ನಮ್ಮ ದೇಶಭಕ್ತಿಯನ್ನು ಪ್ರದರ್ಶಿಸುವ ಮತ್ತು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಯೋಧರನ್ನು ಸ್ಮರಿಸುವ ದಿನವಾಗಿದೆ. 1999 ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ದೇಶಕ್ಕಾಗಿ ಜೀವ ತ್ಯಾಗ ಮಾಡಿದ ಭಾರತೀಯ ಸೈನಿಕರ ಶೌರ್ಯಕ್ಕೆ ಗೌರವ ಸಲ್ಲಿಸಲು ಪ್ರತಿ ವರ್ಷ ಜುಲೈ 26 ರಂದು ‘ಕಾರ್ಗಿಲ್ ವಿಜಯ ದಿವಸ್’ ವನ್ನು ಆಚರಿಸಲಾಗುತ್ತದೆ. ಈ ಘಟನೆಯು ಭಾರತ ಮತ್ತು ಪಾಕಿಸ್ತಾನದ ನಡುವೆ ಪ್ರಾರಂಭವಾದ ಕಾರ್ಗಿಲ್ ಯುದ್ಧದ ಮುಕ್ತಾಯವನ್ನು ಸೂಚಿಸುತ್ತದೆ. 1999 ರಲ್ಲಿ ಜುಲೈ 26 ರಂದು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಭಾರತದ ಭೂ ಪ್ರದೇಶಕ್ಕೆ ನುಗ್ಗಿದ ಪಾಕಿಸ್ತಾನಿ ನುಸುಳುಕೋರರ ವಿರುದ್ಧ ಭಾರತೀಯ ಸೈನಿಕರು ಹೋರಾಡಿ ಗೆಲುವನ್ನು ಸಾಧಿಸಿದರು. ಅಂದಿನಿಂದ ಈ ಮಹತ್ವದ ದಿನವನ್ನು ‘ಕಾರ್ಗಿಲ್ ವಿಜಯ್ ದಿವಸ್’ ಎಂದು ಕರೆಯಲಾಗುತ್ತದೆ. ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲೆಯ ಮಾಜಿ ಸೈನಿಕರು, ಸೈನಿಕ ಶಾಲೆಯ ಎನ್.ಸಿ.ಸಿ. ಸಿಬ್ಬಂದಿ ವರ್ಗದವರು ಸಕ್ರಿಯವಾಗಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಚಾರ್ಯೆ ಗ್ರೂಪ್ ಕ್ಯಾಪ್ಟನ್ ರಾಜಲಕ್ಷ್ಮಿ ಪೃಥ್ವಿರಾಜ್ ಅವರು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಸ್ಮರಣಾರ್ಥ ಸ್ಥಳದಲ್ಲಿ ಪುಷ್ಪಗುಚ್ಚವನ್ನು ಹಾಕುವ ಮೂಲಕ ಹುತಾತ್ಮರಿಗೆ ಪುಷ್ಪನಮನ ಸಲ್ಲಿಸಿದರು. ಹುತಾತ್ಮ ಯೋಧರಿಗೆ ಗೌರವ ಸೂಚಕವಾಗಿ ಎರಡು ನಿಮಿಷ ಮೌನ ಆಚರಿಸಿದರು. ಉಪಸ್ಥಿತರಿದ್ದ ಯೋಧರು ಹಾಗೂ ಮಾಜಿ ಸೈನಿಕರು ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯ ಯೋಧರು, ಮಾಜಿ ಸೈನಿಕರು ಮತ್ತು ಅವರ ಕುಟುಂಬದವರು, ಉಪ-ಪ್ರಾಚಾರ್ಯೆ ಕಮಾಂಡರ್ ಮೀನಾ ಕುಮಾರಿ, ಆಡಳಿತಾಧಿಕಾರಿಯಾದ ಮೇಜರ್ ರಿತೇಶ್ ಕುಮಾರ್ ಹಾಗೂ ಹಿರಿಯ ಮಾಸ್ಟರ್ ಶ್ರೀ ಪಿ.ಎಂ.ಶೆಟ್ಟಿ, ಶೈಕ್ಷಣಿಕ ಮತ್ತು ಆಡಳಿತ ಸಿಬ್ಬಂದಿವರ್ಗದವರು ಮತ್ತು ಕೆಡೆಟ್‌ಗಳು ಉಪಸ್ಥಿತರಿದ್ದರು.