Sept- 9 ಕ್ಕೆ ಇಂಡಿಯಲ್ಲಿ ಮೆಗಾ ಲೋಕ ಅದಾಲತ್; 3 ಸಾವಿರ ಪ್ರಕರಣ ಇತ್ಯರ್ಥಕ್ಕೆ ಗುರಿ..! ನ್ಯಾ. ಬುದಾರಪುರ
ಇಂಡಿ : ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಸ್ಥಳೀಯ ನ್ಯಾಯಾಲಯದಲ್ಲಿ
ಸಪೆಂಬರ್ 9 ರಂದು ಬೆಳಗ್ಗೆ 10:30 ರಿಂದ ಸಂಜೆ 5 ರ ವರೆಗೆ ರಾಷ್ಟ್ರೀಯ ಲೋಕ ಅದಾಲತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಶ್ರೇಣಿಯ ನ್ಯಾಯಾಧೀಶ ಶ್ರೀನಿವಾಸ ಬುದಾರಪುರ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ
ಕಾನೂನು ಪ್ರಕಾರ ರಾಜಿ ಆಗಬಹುದಾದ ಮತ್ತು ವ್ಯಾಜ್ಯ
ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ್ಯ ಪಡಿಸಿ ಇಬ್ಬರಿಗೂ ನ್ಯಾಯ ಒದಗಿಸುವ ಉದ್ದೇಶದಿಂದ ಮೆಗಾ ಲೋಕ ಅದಾಲತ ಆಯೋಜಿಸಲಾಗಿದೆ.
ಕಳೆದ ಬಾರಿ ನಡೆದ ಲೋಕ ಅದಾಲತ್‌ನಲ್ಲಿ 1805 ಪ್ರಕರಣಗಳು ಇತ್ಯರ್ಥ ಗೊಂಡಿವೆ. ಮತ್ತು ₹ 7 ಕೋಟಿ 66 ಲಕ್ಷ 99,395 ಬ್ಯಾಂಕು, ಪುರಸಭೆ, ಗ್ರಾ.ಪಂ ಕರವಸೂಲಾತಿ, ಫೈನಾನ್ಸ, ಬಡ್ಡಿ ವ್ಯವಹಾರ ಸೇರಿದಂತೆ ಇಲಾಖೆಗಳಿಗೆ ಸಂದಾಯವಾಗಬಹುದಾದ ಹಣ
ಸಂದಾಯವಾಗಿದೆ ಎಂದರು. ಈ ಬಾರಿ ಅದಕ್ಕೂ ಹೆಚ್ಚು ಪ್ರಕರಣಗಳನ್ನು ರಾಜಿ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಈ ಅದಾಲತ್ ನಲ್ಲಿ ಹೊಲ, ಮನೆ, ಬ್ಯಾಂಕು, ಅಪಘಾತ, ಚೆಕ್ ಬೌನ್ಸ, ಜನನ, ಸಹಕಾರಿ, ಸಣ್ಣ ಪುಟ್ಟ ಗಲಾಟೆ, ಆರೋಪ ಸೇರಿದಂತೆ ಇನ್ನಿತರ
ಪ್ರಕರಣಗಳನ್ನು ವಿಚಾರಣೆ ಮಾಡುವದರ ಮೂಲಕ ಅಂದೇ ಅಂತಿಮ ನಿರ್ಣಯದ ಮೂಲಕ ರಾಜಿ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಅದಲ್ಲದೆ ಮೂರು ವರ್ಷಕ್ಕಿಂತ ಕಡಿಮೆ ಶಿಕ್ಷೆ, ಕಳ್ಳತನ, ಅಪಘಾತ ಪ್ರಕರಣ, ಜೀವನಾಂಶ ಪ್ರಕರಣ
ಇತ್ಯರ್ಥ್ಯ ಪಡಿಸುವ ಅವಕಾಶವಿದೆ ಎಂದರು. ಹಲವು ವರ್ಷಗಳ ಕಾಲ ಕಾನೂನು ಹೋರಾಟ ಮಾಡಿ ಒಬ್ಬರು ಗೆಲ್ಲುತ್ತಾರೆ, ಮತ್ತೊಬ್ಬರಿಗೆ ಸೋಲಾಗುತ್ತದೆ. ಆದರೆ ಅದಾಲತನಲ್ಲಿ ಇಬ್ಬರಿಗೂ ತೃಪ್ತಿಯಾಗುವ ತೀರ್ಮಾನ
ಮಾಡಲಾಗುತ್ತದೆ. ಲೋಕ್ ಅದಾಲತನಲ್ಲಿ ರಾಜಿಯಾದ
ಪ್ರಕರಣಗಳ ಆದೇಶ ಅಂತಿಮವಾಗಿರುತ್ತದೆ. ಕಡಿಮೆ
ಖರ್ಚಿನಲ್ಲಿ ಶೀಘ್ರ ಇತ್ಯರ್ಥ್ಯ ಪಡಿಸಿಕೊಳ್ಳಲು ಅವಕಾಶವಿದೆ. ನೇರವಾಗಿಯೂ ಭಾಗವಹಿಸಬಹುದು. ಇಬ್ಬರಿಗೂ ತೃಪ್ತಿಯಾದರೆ ಮಾತ್ರ ಇತ್ಯರ್ಥ ಮಾಡುತ್ತೇವೆ. ಮತ್ತೆ ಮೇಲ್ಮನವಿಗೆ ಅವಕಾಶ ಇರುವದಿಲ್ಲ. ಕೌಟುಂಬಿಕ ಕಲಹಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ
ಪಡಿಸಲು ಪ್ರಯತ್ನಿಸಲಾಗುವದು ಎಂದು ಬುದಾರಪುರ ಹೇಳಿದರು. ಕಿರಿಯ ಶ್ರೇಣಿ ನ್ಯಾಯಾಧೀಶ ಈಶ್ವರ ಎಸ್.ಎಂ , ಹೆಚ್ಚುವರಿ ನ್ಯಾಯಾಧೀಶ ದೇವರಾಜ ಎಚ್.ಆರ್ ಮತ್ತಿತರಿದ್ದರು.