ತಂಗಡಗಿಯ ಹಡಪದ ಅಪ್ಪಣ್ಣ ಮಹಾಸಂಸ್ಥಾನ ಪೀಠದಲ್ಲಿ ರಾಜ್ಯ ಪದಾಧಿಕಾರಿಗಳ ಸಭೆ:
ಜಾತಿ ಕಾಲಂನಲ್ಲಿ ಹಡಪದ ಎಂದೇ ಬರೆಸಲು ಶ್ರೀಗಳ ಕರೆ.
ಮುದ್ದೇಬಿಹಾಳ: ರಾಜ್ಯ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹಾಗೂ ಕೇಂದ್ರ ಸರ್ಕಾರದ ಜನಗಣತಿ ವೇಳೆ ರಾಜ್ಯಾದ್ಯಂತ ಇರುವ ಸಮಾಜ ಬಾಂಧವರೆಲ್ಲರೂ ಧರ್ಮದ ಕಾಲಂನಲ್ಲಿ ಹಿಂದು, ಜಾತಿಯ ಕಾಲಂನಲ್ಲಿ ಹಡಪದ ಎಂದೇ ಬರೆಸುವ ಮೂಲಕ ಕರ್ನಾಟಕದಾದ್ಯಂತ ನಾವೆಲ್ಲರೂ ಒಂದೇ ಸಮಾಜ ಎನ್ನುವುದನ್ನು ತೋರಿಸಿಕೊಡಬೇಕು ಎಂದು ಸಮಾಜದ ಗುರುಗಳಾಗಿ ನಾವು ಕರೆ ನೀಡುತ್ತಿದ್ದೇವೆ ಎಂದು ತಂಗಡಗಿಯ ಹಡಪದ ಅಪ್ಪಣ್ಣ ಮಹಾಸಂಸ್ಥಾನದ ಪೀಠಾಧ್ಯಕ್ಷ ಅನ್ನದಾನಭಾರತಿ ಅಪ್ಪಣ್ಣ ಶ್ರೀ ತಿಳಿಸಿದರು.
ಕೃಷ್ಣಾ ನದಿ ತೀರದಲ್ಲಿರುವ ತಂಗಡಗಿಯ ಹಡಪದ ಅಪ್ಪಣ್ಣ ಮಹಾಸಂಸ್ಥಾನ ಪೀಠದಲ್ಲಿ ಮಂಗಳವಾರ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಪದಾಧಿಕಾರಿಗಳ ಸಭೆಯ ನಂತರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ ಹಡಪದ ಎನ್ನುವ ಒಂದೇ ಹೆಸರಿನಲ್ಲಿ ಸಮಾಜದವರೆಲ್ಲರೂ ಒಗ್ಗಟ್ಟು ತೋರಿಸಬೇಕಿದೆ. ಇದರಲ್ಲಿ ಮಕ್ಕಳ ಭವಿಷ್ಯವೂ ಅಡಗಿದೆ. ನಮ್ಮ ಸಮಾಜಕ್ಕೆ ೨ಎ ಮೀಸಲಾತಿ ಸಿಗಬೇಕು ಎನ್ನುವ ದೃಷ್ಟಿಯಿಂದಲೂ ಇದು ಅಗತ್ಯವಾಗಿದೆ. ಲಿಂಗಾಯತರು ಎಂದು ೭೦ ಸಾವಿರ, ಹಡಪದ ಎಂದು ೮೦ ಸಾವಿರದಿಂದ ಲಕ್ಷದವರೆಗೆ ಜನಸಂಖ್ಯೆ ಇದೆ ಎನ್ನುವುದು ತಿಳಿದು ಬಂದಿದೆ. ಉಳಿದವರು ಎಲ್ಲಿ ಹೋದರು ಎನ್ನುವ ಗೊಂದಲ ಮೂಡಿದೆ. ಇದನ್ನು ನಿವಾರಿಸಲು ಹಡಪದ ಎನ್ನುವ ಒಂದೇ ಹೆಸರಿನಿಂದ ಗುರ್ತಿಸಿಕೊಳ್ಳಲು ಎಲ್ಲರೂ ಮನಸ್ಸು ಮಾಡಬೇಕು. ೯೦೦ ವರ್ಷಗಳ ಹಿಂದಿನಿಂದಲೂ ಹಡಪದ ಸಮಾಜವು ನಲುಗಿ ಹೋಗಿದೆ. ಈಗ ಎಲ್ಲರೂ ಜಾಗೃತರಾಗುವ ಕಾಲ ಕೂಡಿಬಂದಿದೆ. ರಾಜ್ಯದ ಎಲ್ಲ ಗ್ರಾಮಗಳ ಸಮಾಜದ ಹಿರಿಯರು ಈಗ ಬಂದಿರುವ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳಲು ಮುಂದಾಗಬೇಕು ಎಂದರು.
ಸಂಘದ ರಾಜ್ಯಾಧ್ಯಕ್ಷ ಸಿದ್ದಪ್ಪ ಹಡಪದ ಅವರು ಮಾತನಾಡಿ, ರಾಜ್ಯದ ಹಡಪದ (ಕ್ಷೌರಿಕ, ನಾವಿಂದ, ನಾವಿ) ಸಮಾಜದವರೆಲ್ಲರೂ ಜಾತಿ ಕಾಲಂನಲ್ಲಿ ಹಡಪದ ಎಂದೇ ಬರೆಸಬೇಕು ಎನ್ನುವ ನಿರ್ಣಯವನ್ನು ಇಂದಿನ ರಾಜ್ಯಮಟ್ಟದ ಸಭೆಯಲ್ಲಿ ಸ್ವಾಮೀಜಿಗಳ ಸಮ್ಮುಖ ಕೈಕೊಳ್ಳಲಾಗಿದೆ. ನಮ್ಮ ಮೇಲೆ ನಡೆಯುವ ದಬ್ಬಾಳಿಕೆಗೆ ಬಲಿಯಾಗದೆ ಹಡಪದ ಜಾತಿ ಎಂದೇ ಬರೆಸಬೇಕು. ೧೭ ಉಪನಾಮಗಳು ನಮ್ಮ ಸಮಾಜಕ್ಕೆ ಸೇರಿದ್ದು ಉಳಿದಿರುವ ಇನ್ನೆರಡನ್ನು ಸೇರಿಸುವಂತೆ ಕೋರಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗದ ಆಯೋಗ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದೇವೆ. ಇವೆರಡು ಸೇರಿದರೆ ಬರುವ ಎಲ್ಲ ೧೯ ಉಪನಾಮದವರು ಧರ್ಮದಲ್ಲಿ ಹಿಂದು, ಜಾತಿಯಲ್ಲಿ ಹಡಪದ ಎಂದೇ ಬರೆಸಬೇಕು ಎಂದರು.
ಮುಂದುವರಿದು ಮಾತನಾಡಿದ ರಾಜ್ಯಾಧ್ಯಕ್ಷರು ಕ್ಷೌರಿಕ ಎಂದ ತಕ್ಷಣ ಗೊಂದಲ ಮೂಡುತ್ತದೆ. ನಮ್ಮ ಮೂಲಪದ ನಾಯಿಂದ, ಹಡಪದ ಎಂದಿದೆ. ನಾವು ಮೂಲ ಕನ್ನಡಿಗರು. ೧೯೪೬ರಲ್ಲಿ ಉದ್ಯೋಗ ಅರಸಿ ಆಂಧ್ರದಿಂದ ಕರ್ನಾಟಕಕ್ಕೆ ವಲಸೆ ಬಂದ ಸವಿತಾ ಸಮಾಜದವರು ಕ್ಷೌರಿಕ ವೃತ್ತಿ, ನಾಗಸ್ವರ ಎರಡನ್ನೂ ಬಳಸಿ ಸರ್ಕಾರದ ಮಟ್ಟದಲ್ಲಿ ಬೆಳೆದು ಎಲ್ಲ ಸೌಲಭ್ಯ ಪಡೆಯುತ್ತಿದ್ದಾರೆ. ಹಡಪದ ಸಮಾಜದವರು ಹಳ್ಳಿಗಳಲ್ಲಿರುವುದರಿಂದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಗೆಜೆಟ್‌ನ ೮ಎ ಕಾಲಂನಲ್ಲಿ ೨೮ ಒಳಪಂಗಡ ಬಂದರೆ ಅದರಲ್ಲಿ ಕೇವಲ ೧೯ ಒಳಪಂಗಡ ಮಾತ್ರ ಹಡಪದ ಜಾತಿಗೆ ಸಂಬಂಧಿಸಿವೆ. ಕ್ಷೌರಿಕ ವೃತ್ತಿ ಮಾಡುವವರೆಲ್ಲರೂ ಹಡಪದ ಸಮಾಜದವರಲ್ಲ. ಮುಸ್ಲೀಂ, ಮರಾಠಾ ಸಮಾಜದವರೂ ನಮ್ಮ ವೃತ್ತಿಯಲ್ಲಿದ್ದಾರೆ. ಅವರೆಲ್ಲರನ್ನೂ ಹಡಪದ ಜಾತಿ ಎನ್ನಲಿಕ್ಕಾಗುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಫ್.ನಾವಿ, ಧಾರವಾಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಫಕೀರೇಶ ಹಡಪದ, ಎಂ.ಎಸ್.ನಾವಿ, ಈರಣ್ಣ ಸಣ್ಣೂರ, ಮಲ್ಲಣ್ಣ ಹಡಪದ, ಹಣಮಂತ ಗುಡದಿನ್ನಿ, ಮುತ್ತಣ್ಣ ಹಡಪದ, ಶಂಕರ ಹಡಪದ, ಸಂತೋಷ್ ಹಡಪದ, ಅಶೋಕ್ ನಾವಿ ಸೇರಿದಂತೆ ಉಪಸ್ಥಿತರಿದ್ದರು.
ಸವಿತಾ ಮತ್ತು ಹಡಪದ ಎರಡೂ ಒದೇ ಜಾತಿ ಅಲ್ಲ. ಎರಡಕ್ಕೂ ಯಾವುದೇ ಸಂಬಂಧ ಇಲ್ಲ. ಸವಿತಾ ಸಮಾಜದವರು ತೆಲುಗು ಮಾತನಾಡುತ್ತಾರೆ, ಹಡಪದ ಸಮಾಜದವರಾದ ನಾವು ಕನ್ನಡ ಮಾತನಾಡುತ್ತೇವೆ. ಸವಿತಾ ಸಮಾಜದವರನ್ನು ಹಡಪದ ಜಾತಿ ಎನ್ನಲಿಕ್ಕಾಗುವುದಿಲ್ಲ.