ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರೆಯ ಪೂರ್ವಭಾವಿ ಸಭೆ
ಹನೂರು : ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ವೃತ್ತ ನಿರೀಕ್ಷಕರಾದ ಶಶಿಕುಮಾರ್ ಮಾತನಾಡಿ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವವನ್ನು ಎಲ್ಲಾ ಸಮುದಾಯದವರು ಒಗ್ಗೂಡಿ ಶಾಂತಿ ಸೌಹರ್ದತೆಯಿಂದ ಆಚರಣೆ ಮಾಡಬೇಕು. ಏಪ್ರಿಲ್ 1 ರಿಂದ 4 ರವರೆಗೆ ನಾಲ್ಕು ದಿನಗಳ ಕಾಲ ನಡೆಯುವ ಗ್ರಾಮ ದೇವತೆ ಜಾತ್ರಾ ಮಹೋತ್ಸವಕ್ಕೆ ನೂರಾರು ವರ್ಷ ಇತಿಹಾಸವಿದೆ. ಈ ಹಬ್ಬವನ್ನು ಪಟ್ಟಣದ ಎಲ್ಲಾ ಸಮುದಾಯದವರು ಆಚರಣೆ ಮಾಡುವುದರಿಂದ ಯಾವುದೇ ಗಲಾಟೆ ಅವಕಾಶ ಮಾಡಿಕೊಡಬಾರದು ಹಾಗೂ ಜಾತ್ರಾ ಮಹೋತ್ಸವ ಯಶಸ್ವಿಯಾಗಲು ನಮ್ಮ ಇಲಾಖೆ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.
ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಾಲಯದ ಕಾರ್ಯದರ್ಶಿ ಲಿಂಗರಾಜ್ ಗೌಡ ಮಾತನಾಡಿ ಗ್ರಾಮ ದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವ ನಾಲ್ಕು ದಿನಗಳ ಕಾಲ ನಡೆಯಲಿದ್ದು ಈ ಬಾರಿ ಏಪ್ರಿಲ್ 2 ಮಂಗಳವಾರದಂದು ಮೊಟ್ಟಮೊದಲ ಬಾರಿಗೆ ರಥೋತ್ಸವವು ಇರುವುದರಿಂದ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನೀಡಬೇಕು ಹಾಗೂ ಮಂಗಳವಾರ ಹೆಣ್ಣು ಮಕ್ಕಳು ತಂಪು ಜ್ಯೋತಿಯನ್ನು ಹೊತ್ತು ತರುವುದರಿಂದ ಮಹಿಳಾ ಸಿಬ್ಬಂದಿಗಳನ್ನು ನೇಮಕ ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಬ್ ಇನ್ಸ್ಪೆಕ್ಟರ್ ರಿಹಾನ ಬೇಗಮ್ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಾಲಯದ ಅಧ್ಯಕ್ಷರು ತಿಮ್ಮೇಗೌಡ, ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಗಿರೀಶ್ ,ಸಂಪತ್ ಕುಮಾರ್, ಮಾಜಿ ಉಪಾಧ್ಯಕ್ಷರಾದ ಮಾದೇಶ್ , ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರಾದ ಸಿದ್ದರಾಜು ಮುಖಂಡರುಗಳಾದ ಮಂಜೇಶ್ ರವಿ ಗೌಡ, ನಟರಾಜು , ಮಹೇಶ್, ಸತೀಶ ಇನ್ನಿತರರು ಹಾಜರಿದ್ದರು.
ವರದಿ:ಚೇತನ್ ಕುಮಾರ್ ಎಲ್, ಹನೂರು ತಾಲ್ಲೂಕು, ಚಾಮರಾಜನಗರ ಜಿಲ್ಲೆ.