ವಿಕಲಚೇತನರಿಗೆ ಅವಕಾಶ ಕಲ್ಪಿಸಿ-ಸಂತೋಷ ಬಂಡೆ
ಇಂಡಿ: ಮಕ್ಕಳು ವಿಕಲಚೇತನರೆಂದು ಅವರನ್ನು ಮನೆಯಲ್ಲೇ ಇರಿಸದೇ ಶಾಲೆಗಳಿಗೆ ಸೇರಿಸಿ ವಿಶೇಷ ಜ್ಞಾನ ನೀಡಿ, ಎಲ್ಲರಂತೆ ಸಾಮಾನ್ಯ ಜೀವನ ಸಾಗಿಸಲು ಅನುಕೂಲ ಕಲ್ಪಿಸಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ಮಂಗಳವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ‘ವಿಶ್ವ ವಿಕಲಚೇತನರ ದಿನ’ವನ್ನು ಉದ್ಘಾಟಿಸಿ ಮಾತನಾಡಿದರು.
ವಿಶ್ವದಲ್ಲಿ ಬಹಳಷ್ಟು ವಿಕಲಚೇತನರು ತಾವು ಯಾರಿಗಿಂತ ಕಡಿಮೆ ಇಲ್ಲ ಎಂಬುದನ್ನು ನಾನಾ ರಂಗಗಳಲ್ಲಿ ಸಾಧಿಸಿ ತೋರಿಸಿದ್ದಾರೆ. ಅಂಗವೈಕಲ್ಯ ಅವರ ಪ್ರತಿಭೆಗೆ ಅಡ್ಡಿಯಾಗದಂತೆ ಸಮಾಜ ಅವರಿಗೆ ಸಮಾನ ಅವಕಾಶಗಳನ್ನು ಕೊಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಎಸ್ ಎಸ್ ಅರಬ ಮಾತನಾಡಿ, ವಿಕಲಾಂಗ ವ್ಯಕ್ತಿಗಳು ಕಲೆ, ವಿಜ್ಞಾನ, ಕ್ರೀಡೆ, ಸಂಗೀತ, ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಈ ದಿನವು ವಿಕಲಾಂಗ ವ್ಯಕ್ತಿಗಳ ಅಪಾರ ಸಾಮರ್ಥ್ಯವನ್ನು ಮತ್ತು ಅವರ ನಾಯಕತ್ವವನ್ನು ಸಶಕ್ತಗೊಳಿಸುವ ಮಹತ್ವವನ್ನು ನಮಗೆ ನೆನಪಿಸುತ್ತದೆ ಎಂದು ಹೇಳಿದರು.
ಶಿಕ್ಷಕರಾದ ಎನ್ ಬಿ ಚೌಧರಿ, ಎಸ್ ಪಿ ಪೂಜಾರಿ, ಅತಿಥಿ ಶಿಕ್ಷಕಿ ಅಲ್ಫಿಯಾ ಅಂಗಡಿ ಸೇರಿದಂತೆ ಶಾಲಾ ಮಕ್ಕಳು ಭಾಗವಹಿಸಿದ್ದರು.