ಮಧುಗಿರಿ ಪ್ರತ್ಯೇಕ ಜಿಲ್ಲೆ ಮಾಡಿ : ಮಾಜಿ ಸಭಾಪತಿ ವಿ.ಆರ್ ಸುದರ್ಶನ
ನ್ಯೂಜ್ ಡೆಸ್ಕ್ : ತುಮಕೂರು : ಆಡಳಿತಾತ್ಮಕ ಮತ್ತು ಜನರ ಹಿತದೃಷ್ಟಿಯಿಂದ ಮಧುಗಿರಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಿಸಿಬೇಕು ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್ ಸುದರ್ಶನ ಒತ್ತಾಯಿಸಿದರು.
ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ‘ವಿಶ್ವವಿದ್ಯಾಲಯಗಳ ಮೂಲಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಬೇಕು. ವಿ.ವಿಗಳಲ್ಲಿ ಸಂಶೋಧನೆ, ಅಭಿವೃದ್ಧಿಗೆ ಒತ್ತು ನೀಡಿದರೆ ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
ಈ ನಾಡು, ಇಲ್ಲಿನ ವೈವಿಧ್ಯತೆ ಅರ್ಥ ಮಾಡಿಕೊಂಡವರಿಗೆ ಸಂವಿಧಾನದ ಮಹತ್ವ ತಿಳಿಯುತ್ತದೆ. ಪ್ರಸ್ತುತ ನಾವು ಎಲ್ಲಿಗೆ ತಲುಪಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ನಮ್ಮದು ಬಹುತ್ವ ಭಾರತ ಎಂದು ಅರ್ಥ ಮಾಡಿಕೊಂಡರೆ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಪರೋಪಕಾರಿ ಮನೋಭಾವ ಅರಳಬೇಕು. ಕಾನೂನು ರೂಪಿಸುವಾಗ, ಅಭಿವೃದ್ಧಿ ಕಾರ್ಯ ನಡೆಯುವಾಗ, ಅಳವಡಿಸಿದ ಯೋಜನೆಗಳ ಗುಣಮಟ್ಟ ಪ್ರಶ್ನಿಸುವಾಗ, ಜನರ ಧ್ವನಿಯಾಗಿ ಮಾಧ್ಯಮ ತನ್ನ ಕರ್ತವ್ಯ ನಿರ್ವಹಿಸುವಾಗ ಸಮಾಜದ ಆಶಯಗಳನ್ನು ಅರಿಯಬೇಕು ಎಂದು ಸಲಹೆ ಮಾಡಿದರು.
ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಪರೀಕ್ಷಾಂಗ ಕುಲಸಚಿವ ಕೆ.ಪ್ರಸನ್ನಕುಮಾರ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಂಯೋಜಕ ಎ.ಎಂ.ಮಂಜುನಾಥ್, ಸಹಾಯಕ ಪ್ರಾಧ್ಯಾಪಕ ಕೆ.ವಿ.ಸಿಬಂತಿ ಪದ್ಮನಾಭ ಇತರರು ಉಪಸ್ಥಿತರಿದ್ದರು.