ಗ್ರಂಥಾಲಯ ಸುಸಂಸ್ಕೃತ ಸಮಾಜದ ಹೆಗ್ಗುರುತು-
ಸಂತೋಷ ಬಂಡೆ
ಇಂಡಿ: ಜ್ಞಾನಾರ್ಜನೆಯ ಸ್ಥಳವಾದ ಗ್ರಂಥಾಲಯವು ಜ್ಞಾನ, ಮಾಹಿತಿ, ಸಂಸ್ಕೃತಿಯ ಭಂಡಾರವಾಗಿದೆ. ಸಮಾಜದ ಪ್ರಗತಿಗೆ ಗ್ರಂಥಾಲಯದ ಅವಶ್ಯವಿದ್ದು, ಅದನ್ನು ಸಂರಕ್ಷಿಸಿ, ಅಭಿವೃದ್ಧಿಪಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಮಂಗಳವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಅರಿವು ಕೇಂದ್ರದಲ್ಲಿ ಡಾ.ಎಸ್ ಆರ್ ರಂಗನಾಥನ್ ಅವರ ಜನ್ಮದಿನದ ನಿಮಿತ್ತ ಹಮ್ಮಿಕೊಂಡ ‘ಗ್ರಂಥಪಾಲಕರ ದಿನ’ವನ್ನು ಉದ್ಧೇಶಿಸಿ ಅವರು ಮಾತನಾಡಿದರು.
ಗ್ರಂಥಾಲಯವು ನಮ್ಮ ಜೀವನದ ಪ್ರಮುಖ ಭಾಗವಾಗಿದ್ದು, ಮನುಷ್ಯನಿಗೆ ಖಿನ್ನತೆ, ಹತಾಶೆಯಂತಹ ಸಂದರ್ಭದಲ್ಲಿ ಧನಾತ್ಮಕವಾಗಿ ಯೋಚಿಸುವ ಶಕ್ತಿಯನ್ನು ನೀಡಬಲ್ಲ ಪುಸ್ತಕಗಳನ್ನು ಒದಗಿಸುತ್ತದೆ. ಅದು ಸುಸಂಸ್ಕೃತ ಸಮಾಜದ ಹೆಗ್ಗುರುತಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಿಕ್ಷಕ ಎಸ್ ಆರ್ ಚಾಳೇಕರ ಮಾತನಾಡಿ, ಗ್ರಂಥಾಲಯಗಳು ಶಿಕ್ಷಣ, ಸಂಶೋಧನೆ, ವೈಯಕ್ತಿಕ ಅಭಿವೃದ್ಧಿ ಮತ್ತು ಸಮಾಜದ ಪ್ರಗತಿಗೆ ಅವಶ್ಯಕವಾಗಿದ್ದು, ಅವು ಜ್ಞಾನದ ದೀಪಗಳಾಗಿವೆ. ಭವಿಷ್ಯದ ಪೀಳಿಗೆಗೆ ಜ್ಞಾನದ ಹಸಿವನ್ನು ನೀಗಿಸಿ,ತಿಳುವಳಿಕೆಯ ಶಕ್ತಿಯನ್ನು ವಿಸ್ತರಿಸುತ್ತದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಗ್ರಂಥಪಾಲಕ ಸಚಿನ ಹೊಸೂರು
ಮಾತನಾಡಿ, ಪುಸ್ತಕ ಮನುಷ್ಯನ ಮಿತ್ರ, ಜ್ಞಾನ ನೀಡುವ ಕಾಮಧೇನು, ವ್ಯಕ್ತಿತ್ವ ನಿರ್ಮಾಣದ ಹೆಬ್ಬಾಗಿಲು, ಪುಸ್ತಕ ಖರೀದಿಸಲು ಸಾಧ್ಯವಾಗದ ಜ್ಞಾನದಾಹಿಗೆ ಗ್ರಂಥಾಲಯವು
ಒಂದು ವರ ಇದ್ದಂತೆ ಎಂದು ಹೇಳಿದರು.
ಅಕ್ಬರ ಕೊರಬು, ಶ್ರೀಧರ ಬಾಳಿ, ಬಸವರಾಜ ತಳಕೇರಿ,
ಸಂಗೀತಾ ಮಠಪತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


















