ಪತ್ರ ಬರವಣಿಗೆಯು ಸೃಜನಶೀಲತೆ ಬೆಳೆಸುವ ಸಾಧನ- ಸಂತೋಷ ಬಂಡೆ
ಇಂಡಿ: ಪತ್ರ ಬರವಣಿಗೆಯು ಮನುಷ್ಯ ಸಂಬಂಧವನ್ನು ಬಲಪಡಿಸಿ, ಮಾಹಿತಿಯನ್ನು ನಿಖರವಾಗಿ ಹಂಚಿಕೊಳ್ಳುವದಾಗಿದೆ. ಅದು ಭಾವನೆಗಳನ್ನು ವ್ಯಕ್ತಪಡಿಸಿ, ಕೌಶಲ್ಯಗಳನ್ನು ಬೆಳೆಸುವ ಒಂದು ಅತ್ಯಮೂಲ್ಯ ಸಾಧನವಾಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಸೋಮವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ “ವಿಶ್ವ ಪತ್ರ ಬರವಣಿಗೆ ದಿನ”ವನ್ನು ಉದ್ಧೇಶಿಸಿ ಅವರು ಮಾತನಾಡಿದರು.
ಇಂದಿನ ಡಿಜಿಟಲ್ ಯುಗದಲ್ಲಿ ಅದು ಶಾಶ್ವತ ನೆನಪುಗಳನ್ನು ಸೃಷ್ಟಿಸಲು, ಪ್ರಮುಖ ವ್ಯವಹಾರಗಳನ್ನು ನಿರ್ವಹಿಸಿ, ವೃತ್ತಿಪರ ಸಂಬಂಧಗಳನ್ನು ಬೆಳೆಸಲು ಸಹಾಯಕವಾಗಿದೆ. ಪತ್ರ ಬರವಣಿಗೆಯು ಕೇವಲ ಸಂವಹನದ ಒಂದು ವಿಧಾನವಲ್ಲ, ಅದು ಚಿಂತನಶೀಲತೆ, ಬರವಣಿಗೆಯ ಕೌಶಲ್ಯ ಮತ್ತು ವ್ಯಕ್ತಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಕಲೆಯಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹಿರೇರೂಗಿ ಉರ್ದು ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಬಿ ಡಿ ಚಪ್ಪರಬಂದ ಮಾತನಾಡಿ, ಪ್ರೀತಿ, ಕೃತಜ್ಞತೆ ಮತ್ತು ಇತರ ಭಾವನೆಗಳನ್ನು ವ್ಯಕ್ತಪಡಿಸಲು ಪತ್ರಗಳು ಪರಿಣಾಮಕಾರಿ ವಿಧಾನವಾಗಿದ್ದು, ಪತ್ರ ಬರವಣಿಗೆಯು ವಾಕ್ಯ ರಚನೆ, ವ್ಯಾಕರಣ, ಶಬ್ದಕೋಶ, ಮತ್ತು ಸಂವಹನ ಸಾಮರ್ಥ್ಯಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಹೇಳುತ್ತಾ, ಪತ್ರಗಳನ್ನು ಬರೆಯುವುದ – ರಿಂದ ಸೃಜನಶೀಲತೆ ಮತ್ತು ವೈಯಕ್ತಿಕ ಅಭಿವ್ಯಕ್ತಿಗೆ ಅವಕಾಶ ಸಿಗುತ್ತದೆ, ವ್ಯಕ್ತಿಗಳು ತಮ್ಮ ವಿಶಿಷ್ಟ ಧ್ವನಿಯನ್ನು ವ್ಯಕ್ತಪಡಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು.
ಶಿಕ್ಷಕರಾದ ಎನ್ ಬಿ ಚೌಧರಿ, ಎಸ್ ಪಿ ಪೂಜಾರಿ, ಅತಿಥಿ ಶಿಕ್ಷಕಿ ಅಲ್ಫಿಯಾ ಅಂಗಡಿ ಸೇರಿದಂತೆ ಮಕ್ಕಳು ಭಾಗವಹಿಸಿದ್ದರು.



















