ಮುದ್ದೇಬಿಹಾಳ:ಪಟ್ಟಣದ ಹೃದಯಭಾಗದಲ್ಲಿ ದ್ಯಾಮವ್ವನ ಕಟ್ಟೆಯ ಹತ್ತಿರ ಈಗಾಗಲೇ ನೆಲಸಮಗೊಳಿಸಿರುವ ಹಳೇಯ ವಾಣಿಜ್ಯ ಮಳಿಗೆ ಜಾಗದಲ್ಲಿ ಶಾಸಕ ಸಿ.ಎಸ್.ನಾಡಗೌಡರ ಆಶಯದಂತೆ ೧೫ ಕೋಟಿ ರೂ ವೆಚ್ಚದಲ್ಲಿ ಹೊಸ ಮೆಗಾ ಮಾರ್ಕೆಟ್ ನಿರ್ಮಾಣಗೊಳ್ಳಲಿದ್ದು ಬಹುದಿನಗಳ ಕನಸು ನನಸಾಗಲಿದೆ. ಈ ಕಾಮಗಾರಿಗೆ ಫೆ.೨೭ರಂದು ಸಂಜೆ ೫ ಗಂಟೆಗೆ ಭೂಮಿ ಪೂಜೆ ನೆರವೇರಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ವ್ಯಾಪಾರಸ್ಥರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಮನವಿ ಮಾಡಿದರು.
ಪುರಸಭೆ ಸಭಾ ಭವನದಲ್ಲಿ ಮಂಗಳವಾರ ಸಂಜೆ ಬಜಾರ ವ್ಯಾಪಾರಸ್ಥರ ಪೂರ್ವಭಾವಿ ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೂರು ಹಂತದ ಅನುದಾನದಲ್ಲಿ ಮಾರ್ಕೆಟ್ ನಿರ್ಮಾಣಗೊಳ್ಳಲಿದೆ. ಮೊದಲ ಹಂತದಲ್ಲಿ ಬಿಡುಗಡೆಯಾಗಿರುವ ೪.೬೨ ಕೋಟಿ ರೂ ಅನುದಾನಲ್ಲಿ ೩.೨೦ ಕೋಟಿ ಎಸ್ಎಫ್ಸಿ ವಿಶೇಷ ಅನುದಾನ, ೧.೪೨ ಕೋಟಿ ಪುರಸಭೆ ನಿಧಿಯ ಪಾಲು ಇದೆ. ಎರಡನೇ ಹಂತಕ್ಕಾಗಿ ೫ ಕೋಟಿ ರೂ ಮೀಸಲಿಡಲಾಗಿದೆ. ಮೂರನೇ ಹಂತದಲ್ಲಿ ಅಗತ್ಯ ಬೀಳುವ ೫ ಕೋಟಿ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಎಲ್ಲಿಯೂ ಸಾಲ ಪಡೆಯದೆ ಸರ್ಕಾರದ ಅನುದಾನದಲ್ಲಿ ಶಾಸಕರ ಸಲಹೆಯಂತೆ ಸ್ವಾವಲಂಬಿಯಾಗಿ ಮಾರ್ಕೆಟ್ ನಿರ್ಮಾಣಗೊಳ್ಳಲಿದೆ ಎಂದರು.
ಮತಕ್ಷೇತ್ರದ ಪಟ್ಟಣ ಪ್ರದೇಶಗಳ ಅಭಿವೃದ್ದಿಗೆ ಶಾಸಕರು ೨೦ ಕೋಟಿ ಅನುದಾನ ತಂದಿದ್ದರು. ಅದರಲ್ಲಿ ಮುದ್ದೇಬಿಹಾಳ ಪುರಸಭೆಗೆ ೮ ಕೋಟಿ, ತಾಳಿಕೋಟೆ ಪುರಸಭೆಗೆ ೭ ಕೋಟಿ, ನಾಲತವಾಡ ಪಟ್ಟಣ ಪಂಚಾಯಿತಿಗೆ ೫ ಕೋಟಿ ಹಂಚಿಕೆ ಮಾಡಲಾಗಿದೆ. ಪೌರಾಡಳಿತ ನಿರ್ದೇಶನಾಲಯದಿಂದ ೭.೫ ಕೋಟಿ ಅನುದಾನ ಬಂದಿದೆ. ತಹಸೀಲ್ದಾರ್ ಕಚೇರಿ ಹತ್ತಿರ ವಾಣಿಜ್ಯ ಕಾಂಪ್ಲೆಕ್ಸ್ ನಿರ್ಮಿಸಲು ೫ ಕೋಟಿಗೆ ಲೈನ್ ಎಸ್ಟಿಮೇಟ್ ಮಾಡಲಾಗುತ್ತದೆ. ಪುರಸಭೆ ಪಕ್ಕದ ಜಾಗದಲ್ಲಿ ಕೆಳಗೆ ಕಚೇರಿ, ಮೇಲೆ ಸಭಾ ಭವನ ನಿರ್ಮಿಸುವ ಯೋಜನೆ ಇದೆ. ಇದುವರೆಗೆ ಒಟ್ಟಾರೆ ಪುರಸಭೆಗೆ ೩೦.೫ ಕೋಟಿ ಅನುದಾನ ಬಂದಂತಾಗಿದೆ ಎಂದರು.
ನೆಲಸಮಗೊಳಿಸುವುದಕ್ಕೂ ಮುನ್ನ ಹಳೇ ಕಟ್ಟಡದಲ್ಲಿದ್ದ ವ್ಯಾಪಾರಸ್ಥರಿಗೆ ಮೆಗಾ ಮಾರ್ಕೆಟ್ನಲ್ಲಿ ಆದ್ಯತೆ ಕೊಡುತ್ತೀರಾ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮುಖ್ಯಾಧಿಕಾರಿಯವರು ಆದ್ಯತೆ ಕೊಡುವ ವಿಷಯ ಪುರಸಭೆ ಆಡಳಿತ ಮಂಡಳಿಗೆ ಬಿಟ್ಟದ್ದು. ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುತ್ತದೆ. ಆದ್ಯತೆ ಕೊಡಬೇಕೆನ್ನುವ ಬೇಡಿಕೆಯನ್ನು ಸಾಧ್ಯವಾದಷ್ಟು ಈಡೇರಿಸಲಾಗುತ್ತದೆ ಎಂದು ತಿಳಿಸಿದರು.
ವ್ಯಾಪಾರಸ್ಥರಾದ ವಾಸುದೇವ ಶಾಸ್ತಿç, ವಿಕ್ರಮ್ ಓಸ್ವಾಲ್, ಮಹಾಂತೇಶ ಬೂದಿಹಾಳಮಠ, ಅಪ್ಪು ದೇಗಿನಾಳ ಇನ್ನಿತರರು ಮಾತನಾಡಿ ಮೆಗಾ ಮಾರ್ಕೆಟ್ ನಿರ್ಮಾಣ ಸ್ವಾಗತಿಸಿ ಹಳೇ ವ್ಯಾಪಾರಸ್ಥರಿಗೆ ಆದ್ಯತೆ ಕೊಡುವಂತೆ ಮನವಿ ಮಾಡಿದರು.
ಈ ವೇಳೆ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲಪ್ಪ ನಾಯ್ಕಮಕ್ಕಳ, ಸದಸ್ಯರಾದ ಶಾಜಾದಬಿ ಹುಣಚಗಿ, ರಫೀಕಅಹ್ಮದ ದ್ರಾಕ್ಷಿ, ವೀರೇಶ ಹಡಲಗೇರಿ, ಅಶೋಕ ವನಹಳ್ಳಿ, ನಾಮನಿರ್ದೇಶಿತರಾದ ಗೋಪಿ ಮಡಿವಾಳರ, ಸಂತೋಷ ನಾಯ್ಕೋಡಿ, ಹರೀಶ ಬೇವೂರ, ವರ್ತಕರಾದ ರಮೇಶ ಓಸ್ವಾಲ್, ಶ್ರೀಕಾಂತ ಹಿರೇಮಠ, ದಿ ಕರ್ನಾಟಕ ಕೋ ಆಪ್ ಬ್ಯಾಂಕ್ ನಿರ್ದೇಶಕ ನಿಂಗಣ್ಣ ಚಟ್ಟೇರ ಸೇರಿ ಹಲವರು ಉಪಸ್ಥಿತರಿದ್ದರು.
೧೦೦*೧೨೦ ಅಡಿ ಜಾಗದಲ್ಲಿ ೩ ಅಂತಸ್ತಿನ ಕಟ್ಟಡ ತಲೆ ಎತ್ತಲಿದ್ದು ೪೬ ಮಳಿಗೆಗಳನ್ನು ವಿನ್ಯಾಸಗೊಳಿಸಲಾಗಿದೆ. ನೆಲ ಅಂತಸ್ತಿನಲ್ಲಿ ತರಕಾರಿ ಮಾರುಕಟ್ಟೆ, ಪಾರ್ಕಿಂಗ್ ಸ್ಥಳಾವಕಾಶ ಇರಲಿವೆ.
–ಮಲ್ಲನಗೌಡ ಬಿರಾದಾರ, ಮುಖ್ಯಾಧಿಕಾರಿ, ಪುರಸಭೆ.
ಭೂಮಿ ಪೂಜೆ ಕಾರ್ಯಕ್ರಮ: ಸಚಿವ ಡಾ.ಎಂ.ಬಿ.ಪಾಟೀಲ ಉದ್ಘಾಟಿಸುವರು. ಪೌರಾಡಳಿತ ಸಚಿವ ರಹೀಂ ಖಾನ್, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ಉಪಸ್ಥಿತರಿರುವರು. ಶಾಸಕ, ಕೆಎಸ್ಡಿ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಅಧ್ಯಕ್ಷತೆ ವಹಿಸುವರು. ಸಚಿವ ಶಿವಾನಂದ ಪಾಟೀಲ, ದೆಹಲಿ ವಿಶೇಷ ಪ್ರತಿನಿಧಿ ಎಂಎಲ್ಸಿ ಪ್ರಕಾಶ ಹುಕ್ಕೇರಿ, ಸಂಸದರಾದ ರಮೇಶ ಜಿಗಜಿಣಗಿ, ಡಾ.ಸುಧಾ ಮೂರ್ತಿ ಎಂಎಲ್ಸಿಗಳಾದ ಹಣಮಂತ ನಿರಾಣಿ, ಸುನೀಲಗೌಡ ಪಾಟೀಲ, ಪಿ.ಎಚ್.ಪೂಜಾರ, ಎನ್.ರವಿಕುಮಾರ, ಕೇಶವಪ್ರಸಾದ, ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲಪ್ಪ ನಾಯ್ಕಮಕ್ಕಳ, ಚುನಾಯಿತ, ನಾಮನಿರ್ದೇಶಿತ ಸದಸ್ಯರು ಮುಖ್ಯ ಅತಿಥಿಗಳಾಗಿ, ನಗರಾಭಿವೃದ್ದಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ದೀಪಾ ಚೋಳನ್, ಪೌರಾಡಳಿತ ಇಲಾಖೆಯ ನಿರ್ದೇಶಕ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಪಂ ಸಿಇಓ ರಿಷಿ ಆನಂದ, ಎಸ್ಪಿ ಲಕ್ಷö್ಮಣ ನಿಂಗರಗಿ ವಿಶೇಷ ಆಹ್ವಾನಿತರಾಗಿ ಭೂಮಿ ಪೂಜೆಯಲ್ಲಿ ಪಾಲ್ಗೊಳ್ಳುವರು.