ಕೃಮೇಯೋ.ನೀ.ಸ.ಸಭೆ-ಹಿಂಗಾರು ಹಂಗಾಮಿಗೆ ನೀರು ಪೂರೈಕೆ ಕುರಿತು ನ.5ರಂದು ಬೆಂಗಳೂರಿನಲ್ಲಿ ಸಭೆ.
ಆಲಮಟ್ಟಿ: ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯ ವ್ಯಾಪ್ತಿಯ ಎಲ್ಲಾ ಕಾಲುವೆಗಳ ಮೂಲಕ ಹಿಂಗಾರು ಹಂಗಾಮಿಗೆ ನೀರು ಹರಿಸುವ ಕೃಮೇಯೋ ನೀರಾವರಿ ಸಲಹಾ ಸಮಿತಿ ಸಭೆಯು ನ.5 ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಅಬಕಾರಿ, ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಕೃಮೇಯೋ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರೂ ಆಗಿರುವ ಸಚಿವ ಆರ್.ಬಿ. ತಿಮ್ಮಾಪುರ ಅಧ್ಯಕ್ಷತೆಯಲ್ಲಿ ವಿಕಾಸಸೌಧದ ಎರಡನೇ ಮಹಡಿಯ 222ನೇ ಕೊಠಡಿಯಲ್ಲಿ ಬೆಳಗ್ಗೆ 10.30ಕ್ಕೆ ಸಭೆ ಜರುಗಲಿದೆ ಎಂದು ಕೃಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ ಸಭೆಯ ಸದಸ್ಯ ಕಾರ್ಯದರ್ಶಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂಗಾರು: ಜುಲೈ 8 ರಿಂದ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ಮುಂಗಾರು ಹಂಗಾಮಿಗೆ ಅ.25 ರವರೆಗೆ ನೀರು ಹರಿಸಲಾಗಿತ್ತು. ನ.4 ರವರೆಗೂ ಮುಂಗಾರು ಹಂಗಾಮಿನ ಅವಧಿಯಿದೆ. ಸದ್ಯ ಹಿಂಗಾರು ಹಂಗಾಮಿಗೆ ಎಲ್ಲಿಯವರೆಗೆ ನೀರು ಹರಿಯುತ್ತದೆ ಎಂಬುದು ಸಭೆಯಲ್ಲಿ ನಿರ್ಧಾರವಾಗಲಿದೆ. ಕಳೆದ ವರ್ಷ ಏಪ್ರಿಲ್ 6 ರವರೆಗೂ ಕಾಲುವೆಗಳಿಗೆ ನೀರು ಹರಿಸಲಾಗಿತ್ತು.
ಈ ವರ್ಷ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವದರಿಂದ ಅಕ್ಟೋಬರ್ ಅಂತ್ಯದವರೆಗೂ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಮುಂದುವರೆದಿದೆ.
ಇದರಿಂದ ಮುಂಗಾರು ಹಂಗಾಮಿಗೆ ಕಾಲುವೆಗೆ ನೀರು ಹರಿಸಿದರೂ ಆಲಮಟ್ಟಿಯ ಶಾಸ್ತ್ರಿ ಸಾಗರ ಹಾಗೂ ನಾರಾಯಣಪುರದ ಬಸವಸಾಗರ ಜಲಾಶಯಗಳು ಸಂಪೂರ್ಣ ಭರ್ತಿಯಾಗಿವೆ. ಸದ್ಯ ಎರಡೂ ಜಲಾಶಯಗಳಿಂದ ಬಳಕೆ ಯೋಗ್ಯ 130ಕ್ಕೂ ಅಧಿಕ ಟಿಎಂಸಿ ಅಡಿ ನೀರು ಲಭ್ಯವಿದೆ. ಭಾಷ್ಪೀಕರಣ, ಸಕ್ಕರೆ ಕಾರ್ಖಾನೆ, ಕೂಡಗಿ ಎನ್ ಟಿಪಿಸಿ, ಆರ್ಟಿಪಿಎಸ್, ವೈಟಿಪಿಎಸ್ ಸೇರಿದಂತೆ ಕೈಗಾರಿಕೆ ಮತ್ತಿತರ ಬಳಕೆಗೆ ಉಳಿಸಿಕೊಂಡು ನೀರಾವರಿಗೆ ಸುಮಾರು 90 ಟಿಎಂಸಿ ಅಡಿಗೂ ಅಧಿಕ ನೀರು ಲಭ್ಯವಾಗಲಿದೆ. ಹೀಗಾಗಿ ವಾರಾಬಂಧಿ ಪದ್ಧತಿ ಅಳವಡಿಸಿದರೆ 2026 ರ ಏಪ್ರಿಲ್ ವರೆಗೂ ನೀರು ಹರಿಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಶಾಸ್ತ್ರಿ ಜಲಾಶಯಕ್ಕೆ ಮೇ 19 ರಿಂದ ಒಳಹರಿವು ಆರಂಭಗೊಂಡಿದ್ದು 2025ರ ಅಕ್ಟೋಬರ್ ಅಂತ್ಯದವರೆಗೂ ಒಳಹರಿವು ಇದೆ.
ಇಲ್ಲಿಯವರೆಗೆ ಸುಮಾರು 800 ಟಿಎಂಸಿ ಅಡಿಗಿಂತಲೂ ಅಧಿಕ ನೀರು ಜಲಾಶಯಕ್ಕೆ ಹರಿದುಬಂದಿದ್ದು, ಜಲಾಶಯದಿಂದ ನದಿ ಪಾತ್ರಕ್ಕೆ ಸುಮಾರು 702 ಟಿಎಂಸಿ ಅಡಿ ನೀರನ್ನು ಜಲಾಶಯದಿಂದ ನದಿ ಪಾತ್ರಕ್ಕೆ ಹರಿದು ಹೋಗಿದೆ ಎಂದು ಜಲಾಶಯದ ಮೂಲಗಳಿಂದ ತಿಳಿದುಬಂದಿದೆ.
ಬೆಂಗಳೂರಿನಲ್ಲಿ ಸಭೆ ಬೇಡ: ಕೃಷ್ಣಾ ಮೇಲ್ದಂಡೆ ಯೋಜನೆ ಕೇಂದ್ರ ಸ್ಥಾನ ಆಲಮಟ್ಟಿಯಲ್ಲಿಯೇ ಮುಂಗಾರು ಹಾಗೂ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆ ನಡೆಯುವುದು ವಾಡಿಕೆ. ಈ ಬಾರಿ ಮುಂಗಾರು ಹಂಗಾಮಿಗೆ ನೀರು ಹರಿಸುವ ಸಭೆಯೂ ಬೆಂಗಳೂರಿನಲ್ಲಿ ನಡೆದಿದೆ. ಈಗ ಹಿಂಗಾರು ಹಂಗಾಮಿನ ಸಭೆಯೂ ನಡೆಸಲಾಗುತ್ತಿದೆ. ಇದರಿಂದ ರೈತರು ತಮ್ಮ ಅಹವಾಲು ಹೇಳದಂತೆ ರೈತರನ್ನು ಸಲಹಾ ಸಮಿತಿಯ ಸಭೆಯಿಂದ ದೂರವಿಡುವ ಹುನ್ನಾರ ಅಡಗಿದೆ.
ಆಲಮಟ್ಟಿಯಲ್ಲಿ ಸಭೆ ನಡೆಸಿದ ವೇಳೆ ಅವಳಿ ಜಲಾಶಯಗಳ ವ್ಯಾಪ್ತಿಯ ರೈತರು ತಮ್ಮ ಅಹವಾಲು ಸಲ್ಲಿಸುತ್ತಿದ್ದರು.
ಈ ವರ್ಷ ಮುಂಗಾರು ಮತ್ತು ಹಿಂಗಾರು ಹಂಗಾಮಿಗೆ ನೀರು ಹರಿಸುವ ಸಭೆಗಳು ಬೆಂಗಳೂರಿನಲ್ಲಿ ನಡೆಯುವಂತಾಗಿರು – ವದು, ಅವಳಿ ಜಲಾಶಯ ಫಲಾನುಭವಿ ಜಿಲ್ಲೆಗಳ ಜನಪ್ರತಿನಿಧಿಗಳ ಇಚ್ಚಾಸಕ್ತಿಯ ಪ್ರದರ್ಶನದಂತಾಗಿದ್ದು, ರೈತರನ್ನು ದೂರವಿಟ್ಟು ಬೆಂಗಳೂರಿನಲ್ಲಿ ಸಭೆ ನಡೆಸುವದರ ಹಿಂದೆ ಏನೋ? ಹುನ್ನಾರ ಅಡಗಿದೆ ಎನ್ನುತ್ತಾರೆ ಅಖಂಡ ಕರ್ನಾಟಕ ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ.



















