ಸಾಧನೆ ಎಂಬುದು ಸಾಧಕನ ಸೊತ್ತೆ ಹೊರತು ಸೋಮಾರಿಯ ಸ್ವತ್ತಲ್ಲ..! ಪ್ರಾಚಾರ್ಯೆ ಡಾ ಅಮೃತಾ
ಕಮಲಾಪುರ : ಸಾಧನೆ ಎಂಬುದು ಸಾಧಕನ ಸೊತ್ತೆ ಹೊರತು ಸೋಮಾರಿಯ ಸ್ವತ್ತಲ್ಲ ಎಂಬ ಗಾದೆಯಂತೆ ನಿರಂತರವಾಗಿ ಶ್ರಮವಹಿಸಿ ಅಧ್ಯಯನ ಮಾಡಿದರೆ ಅಗತ್ಯ ಫಲ ದೊರಕುತ್ತದೆ ಎಂದು ಕಮಲಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ಡಾ ಅಮೃತಾ ಕಟಕೆ ಹೇಳಿದರು.
ಕಮಲಾಪುರ ತಾಲೂಕಿನ ಮಹಾಗಾಂವ ಕ್ರಾಸ್ ಮೌಂಟ್ ವೇವ್ ಕಾಲೇಜಿನಲ್ಲಿ ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಮ್ಮಿಕೊಂಡ ದ್ವಿತೀಯ ಪಿಯುಸಿ ಟಾಪರ್ ಹಾಗೂ ಡಿಸ್ಟಿಂಕ್ಷನ್ ವಿದ್ಯಾರ್ಥಿಗಳಿಗೆ ಸತ್ಕಾರ ಸಮಾರಂಭ ಹಾಗೂ ಭೀಮ ಯಾನ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಹಿಂದೆ ಹೆಣ್ಣು ಮಕ್ಕಳು ಮನೆಯ ಹೊಸ್ತಿಲ ದಾಟಿ ಹೊರ ಬರುತ್ತಿರಲಿಲ್ಲ, ಆದರೆ ಇಂದು ಮಹಿಳೆ ಎಲ್ಲಾ ಕ್ಷೇತ್ರ ದಲ್ಲಿಯೂ ಸಾಧನೆ ಮೆರೆದು ಇತರರಿಗೆ ಮಾದರಿಯಾಗುತ್ತಿದ್ದಾಳೆ, ಪಿಯು ಮತ್ತು ಡಿಗ್ರಿ ತರಗತಿಗಳಲ್ಲಿ ಯುವಕರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಯುವತಿಯರು ಕಾಣಸಿಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ, ಇದು ಸಾಧ್ಯವಾಗಿದ್ದು ಡಾ.ಅಂಬೇಡ್ಕರ್ ಅವರು ಬರೆದ ಸಂವಿಧಾನದಿಂದ ಎಂದರು.
ಸಂಸ್ಥೆ ಅಧ್ಯಕ್ಷ ಶಾಂತಕುಮಾರ ಪುರದಾಳ ಮಾತನಾಡಿ ಹೆಚ್ಚು ಅಂಕ ಪಡೆದವರು ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ, ನಿರಂತರ ಅಧ್ಯಯನ ಮುಂದುವರೆಸಿ ನಿರ್ಧಿಷ್ಟ ಗುರಿ ಸಾಧನೆಗೆ ಮುಂದಾಗಬೇಕು, ಕಡಿಮೆ ಅಂಕ ಗಳಿಸಿದವರು ಎದೆಗುಂದುವ ಅಗತ್ಯವಿಲ್ಲ, ತಪ್ಪನ್ನು ತಿದ್ದಿಕೊಂಡು ಮುಂಬರುವ ದಿನಗಳಲ್ಲಿ ಸಾಧನೆಯತ್ತ ಗಮನ ಕೇಂದ್ರಿಕರಿಸಬೇಕು ಎಂದರು.
ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಲೇಂಗಟಿ ಮಾತನಾಡಿ ಯುವಕರ ಮೇಲೆ ದೇಶ ಅಪಾರವಾದ ನಂಬಿಕೆ ಹೊತ್ತು ಕೂತಿದೆ, ಉತ್ತಮ ವ್ಯಕ್ತಿತ್ವ ಬೆಳೆಸಿಕೊಂಡು ಜನ್ಮ ನೀಡಿದ ತಂದೆ ತಾಯಿ ಮತ್ತು ಜನ್ಮನೀಡಿದ ನಾಡಿನ ಖುಣ ತೀರಿಸುವ ಕೆಲಸ ಮಾಡಬೇಕು ಎಂದರು.
ಮೌಂಟ್ ವೇವ್ ಕಾಲೇಜಿನ ಪ್ರಾಂಶುಪಾಲ ಮಹಾದೇವ ಬಡಾ, ಸಾಹಿತಿ ನಾಗಣ್ಣ ಬಡಿಗೇರ, ಸೊಂತ ಕಸಾಪ ವಲಯ ಅಧ್ಯಕ್ಷ ಅನಂತಕುಮಾರ ಪಾಟೀಲ, ಕುಶ ಮಂಠಾಳ, ಸಂತೋಷ ಪಾಟೀಲ, ಭಾಗ್ಯಶ್ರೀ ಇತರರು ಇದ್ದರು.